ಹಾಸನಾಂಬೆ ದೇಗುಲಕ್ಕೆ ಐಜಿ ಬೋರಲಿಂಗಯ್ಯ ಭೇಟಿ

| Published : Oct 29 2023, 01:01 AM IST

ಸಾರಾಂಶ

ನವೆಂಬರ್‌ 2ರಿಂದ ಹಾಸನಾಂಬೆ ದೇಗುಲ ಬಾಗಿಲು ತೆರೆಯಲಿದ್ದು, ಬಂದೋಬಸ್ತ್‌ಗಾಗಿ 1200 ಪೊಲೀಸರನ್ನು ನೇಮಿಸಲಾಗಿದೆ ಎಂದು ಐಜಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ ನವೆಂಬರ್ ೨ರಿಂದ ಆರಂಭವಾಗುವ ಹಾಸನಾಂಬೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮಾಹಿತಿ ಪಡೆದ ನಂತರ ಹೊರ ಜಿಲ್ಲೆಯಿಂದ ಪೊಲೀಸ್ ನಿಯೋಜನೆ ಮಾಡುವುದಾಗಿ ಮೈಸೂರು ದಕ್ಷಿಣ ವಲಯ ಐ.ಜಿ ಡಾ. ಬೋರಲಿಂಗಯ್ಯ ತಿಳಿಸಿದರು. ಹಾಸನಾಂಬ ದರ್ಶನೋತ್ಸವದ ಹಿನ್ನೆಲೆಯಲ್ಲಿ ಶನಿವಾರ ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿದ್ದ ಅವರು, ಡೀಸಿ ಸತ್ಯಭಾಮ ಮತ್ತು ಎಸ್ಪಿ ಮಹಮ್ಮದ್ ಸುಜೀತಾ ಹಾಗೂ ಉಪವಿಭಾಗಧಿಕಾರಿ ಮಾರುತಿ ಅವರಿಂದ ಮಾಹಿತಿ ಪಡೆದು ದೇವಸ್ಥಾನದ ಸರತಿ ಸಾಲು, ವಾಹನಗಳ ಪಾರ್ಕಿಂಗ್, ಭಕ್ತರು ಬಂದು ಹೋಗುವ ಸ್ಥಳ ಸೇರಿದಂತೆ ಇತರೆ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದ ಬಂದೋಬಸ್ತಿಗೆ ೧೨೦೦ಕ್ಕೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಲು ನಿರ್ಧರಿಸಿದರು. ಮೂರು ಪಾಳಿಯಲ್ಲಿ ಸೇವೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದಾಗಿ ಹೇಳಿದರು. ಮೊದಲು ರಾತ್ರಿ ೧೧ ಗಂಟೆಯವರೆಗೂ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿತ್ತು. ಆದರೇ ಲಕ್ಷಾಂತರ ಭಕ್ತರು ಬರುವುದರಿಂದ ಅವರ ಅನುಕೂಲಕ್ಕಾಗಿ ದಿನದ ೨೪ ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಬಂದೋಬಸ್ತ್ ಮಾಡುವುಕ್ಕಾಗಿ ಹಾಸನಕ್ಕೆ ಬರಲಾಗಿದ್ದು, ಬರುವ ಬಹುತೇಕ ಪ್ರಯಾಣಿಕರು ತಮ್ಮ ಸ್ವಂತ ವಾಹನದಲ್ಲಿ ಬರಲಿದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನವನ್ನು ಎಲ್ಲಿ ನಿಲ್ಲಿಸಬೇಕು ಮತ್ತು ಹೊರಗೆ ಹೇಗೆ ಹೋಗಬೇಕು. ಬ್ಯಾರಿಕೇಡ್ ಮಾಡಿ ದಾರಿ ಮಾಡಿಕೊಡುವುದು ಎಲ್ಲದರ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಚರ್ಚೆ ಮಾಡಲಾಗಿದೆ. ಇಲ್ಲಿನ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹಲವಾರು ದಿನಗಳಿಂದ ಹಾಸನಾಂಬೆ ದೇವಾಲಯದ ಬಗ್ಗೆ ಸಭೆಗಳನ್ನು ನಡೆಸಲಾಗಿದ್ದು, ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಮಾಡಲು ಈ ಬಗ್ಗೆ ತಿಳಿಯಲು ಬಂದಿರುವುದಾಗಿ ಹೇಳಿದರು. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಇತರೆ ಕಡೆಯಿಂದಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದರು.