ಸಮೀಕ್ಷೆಯಲ್ಲಿ ಅಧಿಕಾರಿಗಳಿಂದ ರೈತರಿಗೆ ಮೋಸ

| Published : Oct 27 2024, 02:22 AM IST

ಸಮೀಕ್ಷೆಯಲ್ಲಿ ಅಧಿಕಾರಿಗಳಿಂದ ರೈತರಿಗೆ ಮೋಸ
Share this Article
  • FB
  • TW
  • Linkdin
  • Email

ಸಾರಾಂಶ

ವಾರದೊಳಗೆ ತಾಲೂಕಿನಲ್ಲಿ ಬೆಳೆ ಹಾನಿ ಮಾಡಿಕೊಂಡ ಎಲ್ಲ ರೈತರ ಜಮೀನುಗಳ ಸರ್ವೇ ಮಾಡಿ ಹಾನಿಯಾದ ಬೆಳೆಗಳ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಅಧಿಕಾರಿಗಳು ಕಳುಹಿಸಿಕೊಡದಿದ್ದರೆ ಉಗ್ರ ಹೋರಾಟ

ನರಗುಂದ: ಅಕ್ಟೋಬರ್‌ ತಿಂಗಳಲ್ಲಿ ತಾಲೂಕಿನಲ್ಲಿ ಸುರಿದ ಮಳೆಗೆ ಬಿತ್ತನೆ ಮಾಡಿದ್ದ ಬೆಳೆಗಳು ಹಾನಿಯಾದರೂ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಸಮೀಕ್ಷೆ ಮಾಡದೇ ತಾಲೂಕಿನ ರೈತರಿಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸೇನಾ ಸಂಘಟನೆ ಕಾರ್ಯದರ್ಶಿ ಎಸ್.ಬಿ.ಜೋಗಣ್ಣ ಆರೋಪಿಸಿದ್ದಾರೆ.

ಅವರು 3387ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಕಳೆದ ಹಲವು ದಿನಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ತಾಲೂಕಿನಲ್ಲಿ ಸುರಿದು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ, ಬಿಟಿ ಹತ್ತಿ, ಸೂರ್ಯಕಾಂತಿ, ಈರಳ್ಳಿ, ತೊಗರಿ ಸೇರಿದಂತೆ ಇತರ ಬೆಳೆಗಳು ಅತಿಯಾದ ಮಳೆಯಿಂದ ಸದ್ಯ ಕಟಾವಿಗೆ ಬಂದ ಬೆಳೆಗಳು ಜಮೀನಿನಲ್ಲಿ ಕೊಳೆಯುತ್ತಿದ್ದರೂ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳಿಸದೇ ಕೇವಲ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಭಾಗದ ರೈತರ ಜಮೀನುಗಳ ಸಮೀಕ್ಷೆ ಮಾಡಿದ್ದು ಖಂಡನೀಯ ಎಂದರು.

ವಾರದೊಳಗೆ ತಾಲೂಕಿನಲ್ಲಿ ಬೆಳೆ ಹಾನಿ ಮಾಡಿಕೊಂಡ ಎಲ್ಲ ರೈತರ ಜಮೀನುಗಳ ಸರ್ವೇ ಮಾಡಿ ಹಾನಿಯಾದ ಬೆಳೆಗಳ ಮಾಹಿತಿಯ ವರದಿಯನ್ನು ಸರ್ಕಾರಕ್ಕೆ ಅಧಿಕಾರಿಗಳು ಕಳುಹಿಸಿಕೊಡದಿದ್ದರೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ವೀರಬಸಪ್ಪ ಹೂಗಾರ, ಪರಶುರಾಮ ಜಂಬಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಫಕೀರಪ್ಪ ಅಣ್ಣಿಗೇರಿ, ಯಲ್ಲಪ್ಪ ಚಲವಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಶಿವಪ್ಪ ಸಾತಣ್ಣವರ, ಶಂಕ್ರಪ್ಪ ಜಾಧವ, ಮಲ್ಲೇಶಪ್ಪ ಅಣ್ಣಿಗೇರಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಇತರರು ಇದ್ದರು.