ಹಾವೇರಿ ಜಿಲ್ಲೆಯಲ್ಲಿ ಬಿತ್ತನೆಗೆ ಅಣಿಯಾಗುತ್ತಿರುವ ಅನ್ನದಾತ

| Published : May 19 2025, 12:16 AM IST

ಹಾವೇರಿ ಜಿಲ್ಲೆಯಲ್ಲಿ ಬಿತ್ತನೆಗೆ ಅಣಿಯಾಗುತ್ತಿರುವ ಅನ್ನದಾತ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿಯೂ ಮೆಕ್ಕೆಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಇದೆ.

ನಾರಾಯಣ ಹೆಗಡೆ

ಹಾವೇರಿ: ಮಾನ್ಸೂನ್‌ ಪ್ರವೇಶಕ್ಕೂ ಮುನ್ನವೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗಾಗಿ ಜಮೀನು ಹದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕೆಲ ರೈತರು ಈಗಾಗಲೇ ಬಿತ್ತನೆಯನ್ನೂ ಮಾಡಿದ್ದರೆ, ಇನ್ನು ಕೆಲವರು ಒಂದು ವಾರ ಕಾದು ನೋಡಿ ಬಿತ್ತನೆ ಕೈಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮೇ 17ರ ವರೆಗಿನ 84.5 ಮಿಮೀ ವಾಡಿಕೆ ಮಳೆಗೆ ಪ್ರಸ್ತುತ 100.3 ಮಿಮೀ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಬೀಳುತ್ತಿರುವ ಮಳೆ ಕೃಷಿ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದೆ. ನಿತ್ಯವೂ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿರುವುದು ರೈತರನ್ನು ಮುಂಚಿತವಾಗಿಯೇ ಹೊಲಕ್ಕೆ ಇಳಿಸಿದೆ. ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ಬೇಡಿಕೆ ಬರುವುದರಿದ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಅಗತ್ಯ ದಾಸ್ತಾನು ಮಾಡಿಕೊಂಡಿವೆ.

3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿಯೂ ಮೆಕ್ಕೆಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 33715 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 205838 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. 45780 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 19200 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 12031 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 8416 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 250 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತುವ ಗುರಿ ಹೊಂದಲಾಗಿದೆ. 2,40,3093 ಹೆಕ್ಟೇರ್ ಏಕದಳ, 1146 ಹೆಕ್ಟೇರ್ ದ್ವಿದಳ, 31,436 ಹೆಕ್ಟೇರ್ ಎಣ್ಣೆಕಾಳು ಹಾಗೂ 54,196 ಹೆಕ್ಟೇರ್ ವಾಣಿಜ್ಯ ಬೆಳೆಗಳ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಬಿತ್ತನೆ ಬೀಜ ದಾಸ್ತಾನು: ಜಿಲ್ಲೆಯಲ್ಲಿ ಮೆಕ್ಕೆಜೋಳ 6300 ಕ್ವಿಂಟಲ್, ಶೇಂಗಾ 1400 ಕ್ವಿಂಟಲ್, ಬತ್ತ 3578 ಕ್ವಿಂಟಲ್, ಸೋಯಾಬಿನ್ 9450 ಕ್ವಿಂಟಲ್, ಜೋಳ 10 ಕ್ವಿಂಟಲ್, ತೊಗರಿ 675 ಕ್ವಿಂಟಲ್, ಹೆಸರು 332 ಸೇರಿದಂತೆ 21,745 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟಾರೆ 27,730 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ.

ಗೊಬ್ಬರ ದಾಸ್ತಾನು: ಬಿತ್ತನೆ ಗುರಿಗೆ ತಕ್ಕಂತೆ ಅಗತ್ಯ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 28325 ಟನ್ ಯೂರಿಯಾ, 6769 ಟನ್ ಡಿಎಪಿ, 2029 ಟನ್ ಎಂಒಪಿ, 19169 ಟನ್ ಕಾಂಪ್ಲೆಕ್ಸ್, 449 ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 50,740 ಮೆ. ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 11,478 ಮೆ. ಟನ್ ರಸಗೊಬ್ಬರವನ್ನು ರೈತರಿಗೆ ಪೂರೈಸಲಾಗಿದೆ. ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಜಿಲ್ಲೆಯಲ್ಲಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಗುಣ ಹಾಗೂ ಬೆಲೆ ನಿಯಂತ್ರಣ ಮಾಡುವಂತೆ ತನಿಖಾ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 265 ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ 81 ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ರಸಗೊಬ್ಬರದ ಜತೆಗೆ ಲಘು ಪೋಷಕಾಂಶಕಗಳನ್ನು ಲಿಂಕ್ ಮಾಡದೆ ಮಾರಾಟ ಮಾಡಲು ಸೂಚಿಸಲಾಗಿದೆ. ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಹಾಗೂ ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರಗಳನ್ನು ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ ಗೋವಿನಜೋಳ, ಸೋಯಾಬಿನ್, ಶೇಂಗಾ ಮತ್ತು ಇತರ ಬೆಳೆಗಳ ಬೀಜ ವಿತರಣೆಗಾಗಿ 19 ರೈತ ಸಂಪರ್ಕ ಕೇಂದ್ರಗಳ ಜತೆಗೆ 23 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಕೆ. ತಿಳಿಸಿದ್ದಾರೆ.