ವಿಜೃಂಭಣೆಯಿಂದ ನಡೆದ ರೈತರ ಸುಗ್ಗಿ ಸಂಕ್ರಾಂತಿ

| Published : Jan 15 2025, 12:47 AM IST

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ರೈತರ (ಸುಗ್ಗಿ ಹಬ್ಬ) ಸಂಕ್ರಾಂತಿ ಸಂಭ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು. ನಾಗಮಂಗಲ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ರೈತರು, ರೈತ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಸಂಕ್ರಾಂತಿ ಸಂಭ್ರಮದ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ರೈತರ (ಸುಗ್ಗಿ ಹಬ್ಬ) ಸಂಕ್ರಾಂತಿ ಸಂಭ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.

ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ರೈತರು, ರೈತ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಸಂಕ್ರಾಂತಿ ಸಂಭ್ರಮದ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿ ತಳಿರು ತೋರಣ, ಸ್ವಾಗತ ಕೋರುವ ಬೃಹತ್ ಕಮಾನುಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಭರ್ತಿಯಾಗಿದ್ದ ದೇವಲಾಪುರ ಕೆರೆಗೆ ಪತ್ನಿ ಧನಲಕ್ಷ್ಮಿ ಹಾಗೂ ಮಂಡ್ಯ ಶಾಸಕ ರವಿಕುಮಾರ್‌ ಜೊತೆಗೂಡಿ ಬಾಗಿನ ಅರ್ಪಿಸಿದರು.

ಭವ್ಯ ಮೆರವಣಿಗೆ:

ಬಳಿಕ ಅಲಂಕರಿಸಿದ್ದ ಎತ್ತಿನ ಗಾಡಿ ಏರಿದ ಸಚಿವ ಚಲುವರಾಯಸ್ವಾಮಿ ಚಾಟಿ ಹಿಡಿದು ಸ್ವತಃ ಎತ್ತಿನ ಗಾಡಿ ಓಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಸಚಿವರು ಮತ್ತು ಗಣ್ಯರಿಗೆ ಅದ್ಧೂರಿ ಸ್ವಾಗತ ಕೋರಿದರೆ, ಮಂಗಳವಾದ್ಯ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕೋಲಾಟ, ನಂದಿ ಕುಣಿತ, ಪಟದ ಕುಣಿತ ಸೇರಿದಂತೆ ೧೫ಕ್ಕೂ ಹೆಚ್ಚು ಗ್ರಾಮೀಣ ಸೊಗಡಿನ ಕಲಾ ತಂಡಗಳು ಮೆರವಣಿಯಲ್ಲಿ ಪಾಲ್ಗೊಂಡು ಮೆರಗು ಹೆಚ್ಚಿಸಿದರು.

ರಾಶಿ ಪೂಜೆ:

ಮೆರವಣಿಗೆ ನಂತರ ಸಿರಿಧಾನ್ಯಗಳ ರಾಶಿ ಪೂಜೆ ಮಾಡುವ ಮೂಲಕ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿದ ನಂತರ 25ಕ್ಕೂ ಹೆಚ್ಚು ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು. ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಬೆಲ್ಲದ ಪರಿಷೆ, ಅವರೆಕಾಯಿ ಪರಿಷೆ ಹಾಗೂ ಬೆಣ್ಣೆ ಪರಿಷೆಯನ್ನೂ ಸಹ ಆಯೋಜಿಸಲಾಗಿತ್ತು.

ಮೆರವಣಿಗೆ ನಂತರ ಕರ್ನಾಟಕ ಪಬ್ಲಿಕ್ ಶಾಲೆ ಆವರಣಕ್ಕೆ ಆಗಮಿಸಿದ ಸಚಿವರು, ನವಧಾನ್ಯಗಳ ರಾಶಿಗೆ ಪೂಜೆ ಮಾಡಿ ಜಿಲ್ಲೆಯಲ್ಲಿ ಮೊದಲ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ಬೆಲ್ಲದ ಪರಿಷೆ, ಅವರೆಕಾಯಿ ಪರಿಷೆ ಹಾಗೂ ಬೆಣ್ಣೆ ಪರಿಷೆಯನ್ನು ವೀಕ್ಷಣೆ ಮಾಡಿದರು. ಮಜ್ಜಿಗೆ ತಯಾರಿಸುವ ಮಂತು ಹಿಡಿದು ಮಡಿಕೆಯಲ್ಲಿದ್ದ ಮೊಸರು ಕಡೆದರು. ನಂತರ ವಿವಿಧ ಮಳಿಗೆಗಳನ್ನು ಉದ್ಘಾಟಿಸಿದರು.

ಗಮನ ಸೆಳೆದ ಮಳಿಗೆಗಳು:

ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ 13 ಮಳಿಗೆ, ಸ್ವಸಹಾಯ ಸಂಘಗಳ 15 ಮಳಿಗೆ, 10 ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಅಲ್ಲದೇ, 50ಕ್ಕೂ ಹೆಚ್ಚು ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನವನ್ನೂ ಸಹ ಆಯೋಜಿಸಲಾಗಿತ್ತು.

ಸುಗ್ಗಿ ಹಬ್ಬದ ದಿನದಂದು ರೈತರು ದನಗಳನ್ನು ಕಿಚ್ಚು ಹಾಯಿಸುವುದು ಸಂಕ್ರಾಂತಿಯ ಪ್ರಮುಖ ಆಕರ್ಷಣೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥರ ಜೊತೆಗೂಡಿ ಸಂಜೆ 6 ಗಂಟೆಗೆ ದನಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಬಳಿಕ ಪ್ರೊ.ಕೃಷ್ಣೇಗೌಡ ಮತ್ತು ರಿಚರ್ಡ್ ಲೂಯಿಸ್ ಅವರಿಂದ ಸಂಕ್ರಾಂತಿ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.

ಮಂಡ್ಯ ಶಾಸಕ ರವಿಕುಮಾರ್, ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಎಂಎಲ್ಸಿ ಎನ್.ಅಪ್ಪಾಜಿಗೌಡ, ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶಕ ಅಶೋಕ್, ಕೃಷಿ ಇಲಾಖೆ ಉಪ ನಿರ್ದೇಶಕಿ ಡಾ.ಕೆ.ಮಾಲತಿ, ತಹಸೀಲ್ದಾರ್ ಜೆ.ಆದರ್ಶ, ತಾಪಂ ಇಒ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಸಮಾಜ ಸೇವಕ ಮಾವಿನಕೆರೆ ಸುರೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ನರಸಿಂಹಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಸಚಿವರ ಸಹೋದರ ಎನ್.ಲಕ್ಷ್ಮೀಕಾಂತ್, ಗ್ರಾಪಂ ಸದಸ್ಯ ಡಿ.ಕೆ.ಸುರೇಶ್, ಹರದನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಿದ್ದಲಿಂಗಮ್ಮ, ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್‌ಗೌಡ, ಕೆಪೆಕ್ ಅಧ್ಯಕ್ಷ ಹರೀಶ್ ಸೇರಿದಂತೆ ಹಲವರು ಇದ್ದರು.