ಮೊದಲು ತಲಾ ಒಬ್ಬ ರೈತರಿಗೆ ೮೦ ಕೆಜಿ ಶೇಂಗಾ ವಿತರಿಸಿದ್ದು, ರೈತರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಒಬ್ಬ ರೈತರಿಗೆ ೨೦ ಕೆಜಿ ಶೇಂಗಾ ವಿತರಣೆಗೆ ಮುಂದಾಗಿರುವುದು ಯಾವ ರೀತಿ ಹೇಗೆ ವಿತರಿಸುತ್ತಿದ್ದಾರೆ ಎಂಬುದು ನಿಗೂಢವಾಗಿದೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಕೇಂದ್ರ ಸರ್ಕಾರದ ನೆರವಿನಲ್ಲಿ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಕಂಪನಿ (ಎನ್‌ಎಸ್‌ಸಿ) ವತಿಯಿಂದ ಪ್ರಾಯೋಗಿಕವಾಗಿ ಮೊದಲ ಬಾರಿಗೆ ತಾಲೂಕಿನಲ್ಲಿ ನೀರಾವರಿ ಹೊಂದಿರುವ ರೈತರಿಗೆ ಉಚಿತವಾಗಿ ಶೇಂಗಾ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದ್ದು, ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿ ಬಳಿ ಯಾವುದೇ ಸಮರ್ಪಕ ಮಾಹಿತಿ ಇಲ್ಲದೇ ಇರುವುದರಿಂದ ಸೋಮವಾರ ರೈತ ಸಂಪರ್ಕ ಕೇಂದ್ರದ ಎದುರು ನೂರಾರು ರೈತರು ಪರದಾಡುವಂತಾಯಿತು.ತಾಲೂಕಿನಲ್ಲಿ ಕೆಂಪು ಮಣ್ಣಿನ ಭೂಮಿ ಇದ್ದು, ಶೇಂಗಾ ಬಿತ್ತನೆಗೆ ಅನುಕೂಲಕರವಾಗಿದೆ. ನೀರಾವರಿ ಸೌಲಭ್ಯವೂ ಇದೆ. ಮೊದಲು ತಲಾ ಒಬ್ಬ ರೈತರಿಗೆ ೮೦ ಕೆಜಿ ಶೇಂಗಾ ವಿತರಿಸಿದ್ದು, ರೈತರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಒಬ್ಬ ರೈತರಿಗೆ ೨೦ ಕೆಜಿ ಶೇಂಗಾ ವಿತರಣೆಗೆ ಮುಂದಾಗಿರುವುದು ಯಾವ ರೀತಿ ಹೇಗೆ ವಿತರಿಸುತ್ತಿದ್ದಾರೆ ಎಂಬುದು ನಿಗೂಢವಾಗಿದೆ.ಪೊಲೀಸ್ ಸರ್ಪಗಾವಲು: ಶೇಂಗಾ ಬೀಜ ಪಡೆಯಲು ಸೋಮವಾರ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸಿದ್ದು, ಶೇಂಗಾ ಬೀಜ ಪಡೆಯಲು ರೈತರು ಹರಸಾಹಸ ಪಡುವಂತಾಗಿದೆ. ಬೆಳಗ್ಗೆ ೮ ಗಂಟೆಯಿಂದಲೇ ರೈತ ಸಂಪರ್ಕ ಕೇಂದ್ರದ ಮುಂದೆ ಕ್ಯೂ ನಿಂತರೂ ಶೇಂಗಾ ಕಾಯಿ ಮಾತ್ರ ಸಿಗುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮತ್ತೊಂದೆಡೆ ಪೊಲೀಸರ ಸರ್ಪಗಾವಲಿನಲ್ಲಿ ಉಚಿತ ಶೇಂಗಾ ಬೀಜಕ್ಕೆ ಪರದಾಟ ಆರಂಭವಾಗಿದೆ. ಯಾವ ರೈತರಿಗೆ ಎಷ್ಟು ಕೇಜಿ ಶೇಂಗಾ ಬೀಜ ಕೊಡಬೇಕು. ಎಷ್ಟು ಎಕರೆ ಪ್ರದೇಶಕ್ಕೆ ಎಷ್ಟು ಹಂಚಿಕೆ ಮಾಡಬೇಕು. ರೈತರಿಂದ ನೀರಾವರಿ ಹೊಂದಿರುವ ಬಗ್ಗೆ ಸೂಕ್ತ ದಾಖಲೆ ಪಡೆಯದೇ ಬೇಕಾಬಿಟ್ಟಿ ಹಂಚಿಕೆಗೆ ಮುಂದಾಗಿದ್ದು, ಕೆಲವು ರೈತರಿಗೆ ಮಾತ್ರ ಉಚಿತ ಶೇಂಗಾ ಬೀಜ ದೊರಕಿದೆ. ಇನ್ನೂ ಸಾವಿರಾರು ಸಂಖ್ಯೆಯ ರೈತರು ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ನಡೆ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.

ರೈತರಲ್ಲಿ ಗೊಂದಲ: ಕೇಂದ್ರ ಸರ್ಕಾರದ ನೆರವಿನಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಉಚಿತ ಶೇಂಗಾ ವಿತರಣೆ ಮಾಡುತ್ತಿದ್ದು, ತಾಲೂಕಿನ ಎಲ್ಲ ರೈತರಿಗೂ ವಿತರಿಸುವಷ್ಟು ಶೇಂಗಾ ಪೂರೈಕೆಯಾಗಿಲ್ಲ. ಇದು ಸಹಜವಾಗಿ ರೈತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬರೀ ೩೦೦ ಕ್ವಿಂಟಲ್ ಶೇಂಗಾ ಕಾಯಿ ಪೂರೈಕೆಯಾಗಿದ್ದು, ತಾಲೂಕಿನ ಎಲ್ಲ ರೈತರು ಒಮ್ಮೆಲೆ ಆಗಮಿಸಿದ್ದು, ಗೊಂದಲಕ್ಕೆ ಕಾರಣವಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಶಿವಕುಮಾರ ಕಾಶಪ್ಪನವರ ತಿಳಿಸಿದರು.ಮಾಹಿತಿ ನೀಡಿಲ್ಲ: ಕೃಷಿ ಇಲಾಖೆ ಯಾವುದೇ ಮಾನದಂಡಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ರೈತರಿಗೆ ಉಚಿತ ಶೇಂಗಾ ಬೀಜ ವಿತರಣೆಗೆ ಮುಂದಾಗಿದ್ದು, ತಾಲೂಕಿನ ಯಾವೊಬ್ಬ ರೈತರಿಗೂ ಮಾಹಿತಿ ನೀಡಿಲ್ಲ. ಒಬ್ಬ ರೈತರಿಂದ ಮತ್ತೊಬ್ಬ ರೈತರಿಗೆ ಗೊತ್ತಾಗುತ್ತಿದ್ದಂತೆ ಶೇಂಗಾ ಪಡೆಯಲು ಬಂದಿದ್ದು, ಬೆಳಗ್ಗೆ ೮ ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದು, ಸಂಜೆಯಾದರೂ ಶೇಂಗಾ ಬೀಜ ಸಿಗಲಿಲ್ಲ. ಕೇಳಿದರೆ ಅಧಿಕಾರಿಗಳು ಖಾಲಿಯಾಗಿವೆ ಎಂದು ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಹಡಗಲಿ ಭಾವನೂರ ಗ್ರಾಮದ ರೈತ ಅರುಣ ತಿಗರಿ ತಿಳಿಸಿದರು.