ರೈತರ ಭೂಮಿಯನ್ನುಹಿಂಪಡೆಯಲ್ಲ: ಸರ್ಕಾರ ಸ್ಪಷ್ಟನೆ

| Published : Oct 29 2024, 12:45 AM IST

ಸಾರಾಂಶ

‘ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಈ ಹಿಂದೆ ಕಾನೂನಾತ್ಮಕವಾಗಿ ಮಂಜೂರಾತಿ ಆಗಿರುವ 12,083 ಎಕರೆ ವಕ್ಫ್‌ ಭೂಮಿಯನ್ನು ಹೊರತುಪಡಿಸಿ ಈಗಾಗಲೇ ಮುಸ್ಲಿಂ ಸಂಸ್ಥೆಗಳ ಮಾಲೀಕತ್ವದಲ್ಲಿರುವ 1345 ಎಕರೆ ಭೂಮಿಯನ್ನು ಮಾತ್ರ ವಕ್ಫ್‌ ಮಂಡಳಿ ವ್ಯಾಪ್ತಿಗೆ ತರಲಾಗುವುದು. ರೈತರಿಗೆ ಮಂಜೂರಾಗಿದ್ದ ಯಾವುದೇ ಜಮೀನನ್ನು ಹಿಂಪಡೆಯಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು ‘ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ಈ ಹಿಂದೆ ಕಾನೂನಾತ್ಮಕವಾಗಿ ಮಂಜೂರಾತಿ ಆಗಿರುವ 12,083 ಎಕರೆ ವಕ್ಫ್‌ ಭೂಮಿಯನ್ನು ಹೊರತುಪಡಿಸಿ ಈಗಾಗಲೇ ಮುಸ್ಲಿಂ ಸಂಸ್ಥೆಗಳ ಮಾಲೀಕತ್ವದಲ್ಲಿರುವ 1345 ಎಕರೆ ಭೂಮಿಯನ್ನು ಮಾತ್ರ ವಕ್ಫ್‌ ಮಂಡಳಿ ವ್ಯಾಪ್ತಿಗೆ ತರಲಾಗುವುದು. ರೈತರಿಗೆ ಮಂಜೂರಾಗಿದ್ದ ಯಾವುದೇ ಜಮೀನನ್ನು ಹಿಂಪಡೆಯಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಲ್ಲದೆ, ಈ ಭಾಗದಲ್ಲಿ ಒತ್ತುವರಿಯಾಗಿರುವ ಜಮೀನನ್ನು ಸರ್ಕಾರ ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯಲಿದೆ ಎಂದು ತಿಳಿಸಿದೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನಿನ ಮೇಲೆ ವಕ್ಫ್‌ ಮಂಡಳಿ ಕಣ್ಣು ಹಾಕಿದೆ ಎಂಬ ವಿವಾದ ತಣಿಸಲು ಅದು ಯತ್ನಿಸಿದೆ.

ಸೋಮವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿಯೂ ಆದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹಾಗೂ ವಸತಿ, ವಕ್ಫ್‌ ಮತ್ತು ಹಜ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ವಿವಾದ ತಣಿಸುವ ಹೇಳಿಕೆ ನೀಡಿದರು.

‘ವಿಜಯಪುರ ಜಿಲ್ಲೆಯ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಕರಣಗಳ ಮರು ಪರಿಶೀಲನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಅಲ್ಲದೆ, ಇಂಡಿ ತಾಲೂಕಿನಲ್ಲಿ ಸಂಬಂಧಪಟ್ಟವರಿಗೆ ನೋಟಿಸ್‌ ನೀಡದೆ 41 ಪ್ರಕರಣಗಳಲ್ಲಿ ಭೂಮಿಯನ್ನು ವಕ್ಫ್ ವ್ಯಾಪ್ತಿಗೆ ತಂದಿರುವುದನ್ನು ಪುನರ್‌ ಪರಿಶೀಲಿಸಲು ತೀರ್ಮಾನಿಸಲಾಗಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದೆ’ ಎಂದರು.

ಕೃಷ್ಣ ಬೈರೇಗೌಡ ಮಾತನಾಡಿ, ‘ರೈತರಿಗೆ ಮಂಜೂರಾಗಿರುವ ಯಾವುದೇ ಭೂಮಿಯನ್ನು ವಾಪಸ್‌ ಪಡೆಯುವ ಪ್ರಶ್ನೆ ಇಲ್ಲ. ಅಂತಹ ಯಾವುದೇ ರೈತರಿಗೂ ನೋಟಿಸ್‌ ನೀಡಿಲ್ಲ. ಈ ಸಂಬಂಧ ಪ್ರತಿಪಕ್ಷದವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಹೊನವಾಡಿಯಲ್ಲಿ 1200 ಎಕರೆ ವಕ್ಫ್‌ ಆಸ್ತಿಗೆ ಸೇರಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲಿ ಇರುವ ವಕ್ಫ್‌ ಆಸ್ತಿ 11 ಎಕರೆ ಮಾತ್ರ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರ ನಡುವೆ ಸಂಘರ್ಷ ಸೃಷ್ಟಿಸಿ ನೆಮ್ಮದಿ ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ರೈತರಿಗೆ ಮಂಜೂರಾಗದ 1345 ಎಕರೆಯಲ್ಲಿ ಬಹುತೇಕ ಭೂಮಿಯು ಮಸೀದಿ, ಖಬರ್‌ಸ್ಥಾನ್‌ ಸೇರಿದಂತೆ ಮುಸ್ಲಿಂ ಸಮುದಾಯದ ಸಂಸ್ಥೆಗಳ ಹೆಸರಲ್ಲೇ ಇದೆ. ಅದನ್ನು ವಕ್ಫ್‌ ಮಂಡಳಿಗೆ ನೀಡಲು ಅಲ್ಪಸಂಖ್ಯಾತ ಇಲಾಖೆಯು ಪ್ರಸ್ತಾವನೆ ನೀಡಿದೆ. ಆ ಪ್ರಕಾರ ಇಂದೀಕರಿಸುವ ಪ್ರಯತ್ನ ನಡೆಸಲಾಗಿದೆ. ಯಾವುದೇ ರೈತರಿಗೆ ಮಂಜೂರಾಗಿರುವ ವಕ್ಫ್‌ ಭೂಮಿಯನ್ನು ವಾಪಸ್‌ ಪಡೆಯುವ, ನೋಟಿಸ್‌ ನೀಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ, ಮಾಡುವುದೂ ಇಲ್ಲ. ಆದರೆ, ಯಾವುದೇ ರೈತರಿಗೆ ಮಂಜೂರಾಗಿದ್ದರೂ ವಕ್ಫ್‌ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣದಲ್ಲಿ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುತ್ತೇವೆ’ ಎಂದು ಹೇಳಿದರು.

ತಹಶೀಲ್ದಾರ್‌ ವಿರುದ್ಧ ಕ್ರಮ:

ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ,1974 ರ ಗೆಜೆಟ್‌ನಲ್ಲಿ ವಿಜಯಪುರ ನಗರ ಮಹಾಲ ಭಾಗಾಯತ ಖಾಜಾ ಅಮೀನ್ ದರ್ಗಾ ಸರ್ವೇ ನಂಬರ್ ಹೊನವಾಡ ಎಂದು ಹಾಕಲಾಗಿತ್ತು. ಬಳಿಕ 1977 ರಲ್ಲಿ ತಪ್ಪನ್ನು ಸರಿಪಡಿಸಿದ್ದಾರೆ. 10 ಎಕರೆ 39 ಗುಂಟೆ ಮಾತ್ರ ನೋಟಿಫಿಕೇಷನ್ ಇದೆ. ಜಿಲ್ಲೆಯಲ್ಲಿ 124 ನೋಟಿಸ್ ಹೋಗಿವೆ. ಅದರಲ್ಲಿ 433 ರೈತರು ಇದ್ದಾರೆ. ಮ್ಯುಟೇಷನ್ ಕಾಲಂ 9 ರಲ್ಲಿ ಒಂದು ಎಕರೆ ಆಸ್ತಿಯೂ ಬದಲಾವಣೆ ಆಗಿಲ್ಲ’ ಎಂದರು.

‘ಕಾಲಂ 11 ರಲ್ಲಿ ಇಂಡಿಯಲ್ಲಿ 41 ಸರ್ವೇ ನಂಬರ್‌ಗಳಿಗೆ ನೋಟಿಸ್‌ ನೀಡದೆ ವಕ್ಫ್ ಆಸ್ತಿ ಎಂದು ಇಂದೀಕರಣ (ಅಪ್‌ಡೇಟ್‌) ಮಾಡಿದ್ದಾರೆ. ಅದನ್ನು ಈಗ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡು ಪುನರ್‌ ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ನೋಟಿಸ್‌ ನೀಡದೆ ನಿಯಮ ಉಲ್ಲಂಘಿಸಿರುವ ತಹಶೀಲ್ದಾರ್‌ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಿ ತೀರ್ಮಾನಿಸಲಾಗಿದೆ’ ಎಂದು ಹೇಳಿದರು.