6 ವರ್ಷದ ನಂತರ ರೈತರ ಭೂಮಿ ವಾಪಸ್‌

| Published : Dec 31 2024, 01:01 AM IST

ಸಾರಾಂಶ

ಹೆದ್ದಾರಿ ವಿಸ್ತರಣೆಗೆ ವಶಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಇಲ್ಲಿಯವರೆಗಾಗಿರುವ ನಷ್ಟವನ್ನು ತುಂಬಿಸಿಕೊಡಬೇಕೆಂದು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಭೂ ಸಂತ್ರಸ್ತರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಹೆದ್ದಾರಿ ವಿಸ್ತರಣೆಗೆ ವಶಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಇಲ್ಲಿಯವರೆಗಾಗಿರುವ ನಷ್ಟವನ್ನು ತುಂಬಿಸಿಕೊಡಬೇಕೆಂದು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಭೂ ಸಂತ್ರಸ್ತರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು.

ತುಮಕೂರು ಹೊನ್ನಾವರ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕಳೆದ ೬ ವರ್ಷಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದುವರೆಗೂ ನಯಾಪೈಸೆ ಪರಿಹಾರವನ್ನೂ ನೀಡಿಲ್ಲ ಹಾಗೂ ಕಾಮಗಾರಿಯನ್ನು ಕೈಗೊಂಡಿಲ್ಲ ಅಲ್ಲದೆ ಈಗ ಏಕಾಏಕಿ ನಿಮ್ಮ ಭೂಮಿ ಬೇಡ ಎಂದು ಅಧಿಕಾರಿಗಳು ಹೇಳುತ್ತಿದ್ದು, ಭೂ ಸಂತ್ರಸ್ಥರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಭೂಸಂತ್ರಸ್ತರಲ್ಲೊಬ್ಬರಾದ ಬಿಳಿಗೆರೆ ಪಾಳ್ಯದ ಶಿವಮೂರ್ತಿ, ಕಳೆದ ೨೦೧೮ರಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಮೂಲಕ ಕಿಬ್ಬನಹಳ್ಳಿ ಗ್ರಾಮದ ಸರ್ವೇ ನಂ ೧೯/೧ಎ೧ ರಿಂದ ಪ್ರಾರಂಭವಾಗಿ ಸುಮಾರು ೧೨೨ ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಇಲ್ಲಿಯವರೆವಿಗೂ ಪರಿಹಾರವನ್ನು ನೀಡಿಲ್ಲ ಅತ್ತ ಯಾವುದೇ ಕಾಮಗಾರಿಯನ್ನು ನಡೆಸುತ್ತಿಲ್ಲ. ಅಲ್ಲದೆ ಈಗ ಏಕಾಏಕಿ ನಿಮ್ಮ ಭೂಮಿಯೂ ಬೇಡ ಎನ್ನುತ್ತಿದ್ದು ನಾವು ಏನು ಮಾಡಲಿ. ಹಾಗಾಗಿ ನಮಗೆ ಕೂಡಲೆ ಆರ್ಥಿಕ ನಷ್ಟವನ್ನು ತುಂಬಿಸಿಕೊಡಬೇಕು ಎಂದು ಸರ್ಕಾರ ಹಾಗೂ ಅಧಿಕಾರಿಗಳನ್ನು ಆಗ್ರಹಿಸಿದರು.

ಮತ್ತೊಬ್ಬ ಭೂ ಸಂತ್ರಸ್ತ ಶಶಿಧರ್ ಮತ್ತು ಲೋಕೇಶ್ ಮಾತನಾಡಿ ಆರು ವರ್ಷಗಳಿಂದಲೂ ಸರ್ಕಾರ ಕಣ್ಣೊರೆಸುವ ಕೆಲಸ ಬಿಟ್ಟು ಭೂ ಸಂತ್ರಸ್ತರಿಗೆ ಪರಿಹಾರ ನೀಡದೆ ವಂಚನೆ ಮಾಡುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಪ್ರತಿನಿತ್ಯ ಅಲೆದು ಸಾಕಾಗಿದೆ. ಅಧಿಕಾರಿಗಳ ಉಡಾಫೆ ಉತ್ತರದಿಂದ ಬೇಸತ್ತು ಹೋಗಿದ್ದೇವೆ. ನಮ್ಮ ಮನೆಗಳು ಹೋಗುತ್ತವೆಂದು ಬಾವಿಸಿ ಭೂಸ್ವಾದೀನವಾಗಿದ್ದ ಮನೆಗಳನ್ನು ಬಿಟ್ಟು ಬೇರೆ ಕಡೆ ವಾಸಿಸುತ್ತಿದ್ದು ಇದ್ದ ಮನೆಗಳ ಬಿಟ್ಟು ಸ್ವಂತ ಮನೆ ಇಲ್ಲದೆ ಬೀದಿಯಲ್ಲಿ ಜೀವನ ನಿರ್ವಹಿಸುವಂತಾಗಿದೆ. ಜಮೀನುಗಳನ್ನು ಸಹ ನಾವು ಹಾಳು ಬಿಟ್ಟಿದ್ದು ಈಗ ಭೂಮಿಯಲ್ಲಿ ಬೆಳೆ ಬೆಳೆಲು ಆಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಲೋನ್ ತೆಗೆದುಕೊಳ್ಳಲು ಹೋದರೆ ಭೂಮಿ ನೋಟಿಫಿಕೇಷನ್ ಆಗಿದೆ ಎಂದು ಹೇಳುತ್ತಾರೆ. ಇದರಿಂದ ಭೂಮಿ ಇದ್ದೂ ಬಿಕ್ಷುಕರಂತೆ ಬದುಕು ನಡೆಸುತ್ತಿದ್ದೇವೆ. ನಿಮಗೆ ಭೂಮಿ ಬೇಡ ಎಂದರೆ ಈಗಲೇ ಡಿನೋಟಿಫಿಕೇಷನ್ ಮಾಡಿಕೊಟ್ಟು ನಷ್ಟ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಭೂಸಂತ್ರಸ್ಥರಾದ ಕಮಲಮ್ಮ ಮತ್ತು ಸೌಭಾಗ್ಯಮ್ಮ ಮಾತನಾಡಿ ಭೂಮಿ ಕೊಡಲು ನಾವೇನು ತಕರಾರು ಮಾಡಿಲ್ಲ, ಸರ್ಕಾರ ನೀಡಿದ ಬೆಲೆಗೆ ನಮ್ಮ ಭೂಮಿಯನ್ನು ನೀಡುತ್ತಿದ್ದೇವೆ. ನಮ್ಮ ಭೂಮಿ ಕೊಟ್ಟರೂ ಹಣ ಕೊಡದಿದ್ದರೆ ಜೀವನ ನಿರ್ವಹಿಸುವುದು ಹೇಗೆ. ಪರಿಹಾರವು ಇಲ್ಲದೆ ನರಳಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆ ನಿತ್ಯದ ಜೀವನ ನಿರ್ವಹಣೆಗೆ ಇದ್ದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರ, ಹಾಗೂ ಭೂಸ್ವಾಧೀನಾಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ನಮಗೆ ವಿಷ ಕುಡಿಯುವುದೊಂದೆ ಪರಿಹಾರವಾಗಿದೆ. ಈಗ ಅಧಿಕಾರಿಗಳು ನಿಮ್ಮ ಭೂಮಿ ಬೇಡ ಎನ್ನುತ್ತಿದ್ದಾರೆ. ಈ ಮಾತನ್ನು ನಮ್ಮ ಭೂಮಿಯನ್ನು ಸರ್ವೆ ಮಾಡುವಾಗಲೇ ಹೇಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿ ಧರ್ಮಪಾಲ್ ಭೇಟಿ ನೀಡಿ ಮಾತನಾಡಿ, ಈ ಭಾಗದ ದಾಖಲಾತಿಗಳು ಏಕಕಾಲಕ್ಕೆ ಬಂದಿಲ್ಲದ ಕಾರಣ ಹೈತೀರ್ಪಿನಲ್ಲಿ ಪರಿಹಾರ ರಚನೆಯಾಗಿಲ್ಲ. ಅಲ್ಲದೆ ೧೩೦ಕೋಟಿ ರು. ಈ ರಸ್ತೆಗೆ ಪರಿಹಾರ ಬೇಕಿದ್ದು ಸರ್ವಿಸ್ ರಸ್ತೆ ವೆಚ್ಚ ಹೆಚ್ಚಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಸದ್ಯದ ಮಾಹಿತಿ ಪ್ರಕಾರ ರೈತರ ಭೂಮಿಯ ಅವಶ್ಯಕತೆ ಇಲ್ಲ. ಇರುವ ಸರ್ಕಾರಿ ಜಮೀನಿನಲ್ಲಿಯೇ ರಸ್ತೆ ಅಗಲೀಕರಣವಾಗಲಿದೆ. ನಾವು ನಿಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿಲ್ಲ ನಿಮ್ಮ ಭೂಮಿ ನಿಮ್ಮ ಹತ್ತಿರವೇ ಇದೆ. ಇದಕ್ಕೆ ಪರಿಹಾರವೂ ಸಿಗುವುದಿಲ್ಲ ಈ ಸಂಬಂಧ ಮೇಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.ಪ್ರತಿಭಟನೆಯಲ್ಲಿ ಭೂ ಸಂತ್ರಸ್ಥರಾದ ಸ್ವಾಮಿ, ನಿರಂಜನ್, ಶಶಿಧರ್, ವೀಣಾ, ಜ್ಯೋತಿ, ಓಂಕಾರಮ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಂತ್ರಸ್ಥರು ಭಾಗವಹಿಸಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು. ಯೋಜನೆಯ ಪ್ರಾಜೆಕ್ಟ್ ಡೈರೆಕ್ಟರ್ ಅನೂಪ್ ಶರ್ಮ, ಸೈಟ್ ಇಂಜಿನಿಯರ್ ಯಶಸ್ವಿನಿ ಭೂ ಸಂತ್ರಸ್ಥರಿಗೆ ಸ್ಪಂದಿಸದ ಕಾರಣ ಇವರ ವಿರುದ್ದ ಆಕ್ರೋಶಗೊಂಡರು.ಬಾಕ್ಸ್...

ಜೀವನ ಹಾಳು ಮಾಡಿದ್ದಿರಿ ಪರಿಹಾರ ನೀಡಿ

ಕಳೆದ ಆರು ವರ್ಷಗಳಿಂದ ರೈತರ ಭೂಮಿಯನ್ನು ವಶಪಡಿಸಿಕೊಂಡು ಸರ್ಕಾರ ಹಾಗೂ ಅಧಿಕಾರಿಗಳು ರೈತರ ಜೀವನ ಜೊತೆ ಚೆಲ್ಲಾಟವಾಡಿ ಈಗ ಏಕಾಏಕಿ ಭೂಮಿ ಬೇಡ ಎಂದು ಹೇಳುವ ಅಧಿಕಾರಿಗಳ ವರ್ತನೆಗೆ ರೈತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚತುಷ್ಪಥ ರಸ್ತೆ ಹೆದ್ದಾರಿಗೆ ಕೆ.ಬಿ. ಕ್ರಾಸ್‌ನಿಂದ ೨.೩ ಕಿ.ಮೀ ಭೂಮಿ ಸ್ವಾಧಿನಕ್ಕೆ ಸರ್ಕಾರ ಫೋರ್ ಓನ್ (೪/೧) ನೋಟೀಸ್ ನೀಡಿತ್ತು. ಆರು ವರ್ಷದ ಹಿಂದೆ ಅಗಲೀಕರಣಕ್ಕಾಗಿ ರಸ್ತೆಯ ಬದಿಯಲ್ಲಿದ್ದ ೨೫೦ಕ್ಕೂ ಹೆಚ್ಚು ಮರಗಳನ್ನು ಕಡಿಯಾಗಿದೆ. ರಸ್ತೆ ಮಧ್ಯದಿಂದ ೧೩೦ ಅಡಿ ದೂರಕ್ಕೆ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಜೊತೆಗೆ ಭೂ ಸ್ವಾಧೀನವಾಗುವ ಮನೆಗಳವರು ಮನೆಗಳನ್ನು ಖಾಲಿ ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಈಗ ಭೂಮಿ ಬೇಡ. ನಿಮಗೆ ೧೩೦ ಕೋಟಿ ಪರಿಹಾರ ನೀಡಬೇಕಾಗಿದ್ದು ಅದು ನಮಗೆ ಹೊರೆಯಾಗಲಿದೆ ಹಾಗಾಗಿ ಯಾವುದೇ ಭೂಸ್ವಾಧೀ ನ ಮಾಡದೆ ಲಭ್ಯವಿರುವ ಇರುವ ರಸ್ತೆಯಲ್ಲಿಯೇ ಎಕ್ಟೆಂಡ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡಲು ತಯಾರಿ ನಡೆಸಿದ್ದು ಭೂಮಿ ಬೇಡ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ ನಮ್ಮ ಜೀವನ ಹಾಳು ಮಾಡಿದ್ದೀರಿ ನಮಗೆ ಅನ್ಯಾಯವಾಗಿದೆ ಎಂದು ಸಂತ್ರಸ್ತರು ಕಣ್ಣೀರು ಹಾಕಿದರು. ಸಂತ್ರಸ್ತರಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ಸು ನೀಡುವ ಜೊತೆಗೆ ಆರು ವರ್ಷಕ್ಕೆ ಪರಿಹಾರದ ಮೊತ್ತವನ್ನು ನೀಡಬೇಕೆಂದು ಆಗ್ರಹಿಸಿದರು.