ಸಾಮೂಹಿಕ ಕೃಷಿಯಿಂದ ರೈತರ ಬದುಕು ಸದೃಢ: ಶಾಸಕ ನರೇಂದ್ರಸ್ವಾಮಿ

| Published : Mar 16 2025, 01:48 AM IST

ಸಾಮೂಹಿಕ ಕೃಷಿಯಿಂದ ರೈತರ ಬದುಕು ಸದೃಢ: ಶಾಸಕ ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಪದ್ಧತಿಯಲ್ಲಿ ರೈತರು ಹೊಸತನದತ್ತ ಹೊರಳಬೇಕು. ಸಾಂಘಿಕ ಕೃಷಿ ಚಟುವಟಿಕೆಯಿಂದ ಸಿಗಬಹುದಾದ ಲಾಭದತ್ತ ಆಲೋಚಿಸಬೇಕು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯುವ ಏಕಬೆಳೆಯಿಂದ ಆಗುವ ಪ್ರಯೋಜನ, ಕೃಷಿ ಉತ್ಪನ್ನಕ್ಕೆ ಸಿಗುವ ಬೇಡಿಕೆ, ಅದರಿಂದ ಸಾಧಿಸಬಹುದಾದ ಆರ್ಥಿಕ ಬೆಳವಣಿಗೆ ಇವೆಲ್ಲದರ ಬಗ್ಗೆ ಎಲ್ಲರೂ ಕುಳಿತು ಚರ್ಚಿಸಿ, ಸಮಸ್ಯೆ, ಗೊಂದಲಗಳಿದ್ದರೆ ನಮ್ಮೆದುರು ಮುಕ್ತವಾಗಿ ಇಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಮೂಹಿಕ ಕೃಷಿ ಪದ್ಧತಿಯ ಮಹತ್ವವನ್ನು ಅರಿತು ರೈತರು ಒಗ್ಗಟ್ಟು ಮತ್ತು ಒಮ್ಮಸ್ಸಿನಿಂದ ಹೊಸ ಕೃಷಿಯತ್ತ ಮುಖ ಮಾಡಿದರೆ ಬದುಕು ಸದೃಢವಾಗುತ್ತದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ತಾಲೂಕಿನ ದೊಡ್ಡಭೂವಳ್ಳಿಯಲ್ಲಿ ಶನಿವಾರ ನಡೆದ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ಕುರಿತ ಫಲಾನುಭವಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷಿ ಪದ್ಧತಿಯಲ್ಲಿ ರೈತರು ಹೊಸತನದತ್ತ ಹೊರಳಬೇಕು. ಸಾಂಘಿಕ ಕೃಷಿ ಚಟುವಟಿಕೆಯಿಂದ ಸಿಗಬಹುದಾದ ಲಾಭದತ್ತ ಆಲೋಚಿಸಬೇಕು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯುವ ಏಕಬೆಳೆಯಿಂದ ಆಗುವ ಪ್ರಯೋಜನ, ಕೃಷಿ ಉತ್ಪನ್ನಕ್ಕೆ ಸಿಗುವ ಬೇಡಿಕೆ, ಅದರಿಂದ ಸಾಧಿಸಬಹುದಾದ ಆರ್ಥಿಕ ಬೆಳವಣಿಗೆ ಇವೆಲ್ಲದರ ಬಗ್ಗೆ ಎಲ್ಲರೂ ಕುಳಿತು ಚರ್ಚಿಸಿ, ಸಮಸ್ಯೆ, ಗೊಂದಲಗಳಿದ್ದರೆ ನಮ್ಮೆದುರು ಮುಕ್ತವಾಗಿ ಇಡಿ. ಅದಕ್ಕೆ ಪರಿಹಾರವನ್ನು ನಾವು ದೊರಕಿಸುತ್ತೇವೆ. ಸಾಮೂಹಿಕ ಕೃಷಿಗೆ ಎಲ್ಲರೂ ಕೈಜೋಡಿಸುವ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಳ್ಳುವಂತೆ ಮನವಿ ಮಾಡಿದರು.

ನಾನಿಲ್ಲಿಗೆ ರಾಜಕಾರಣ ಮಾಡಲು ಬಂದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಈ ಯೋಜನೆಯನ್ನು ವಿರೋಧಿಗಳೂ ಇದ್ದಾರೆ. ದುಡ್ಡು ಮಾಡಲು ಕಮಿಷನ್ ಆಸೆಗೆ ಯೋಜನೆ ತಂದಿದ್ದಾನೆ ಎಂದೆಲ್ಲಾ ಟೀಕಿಸದ್ದಾರೆ. ವಿವೇಚನೆ ಇಲ್ಲದವರು ಮಾತನಾಡುವವರು ಸಾಧನೆ ಮಾಡುವವರಲ್ಲ. ಅವರ ಮಾತನ್ನು ಕೇಳುತ್ತಾ ಕುಳಿತರೆ ನಾವು ಸಾಧನೆ ಮಾಡಲಾಗುವುದಿಲ್ಲ ಎಂದು ಟೀಕಾಕಾರರಿಗೆ ಕುಟುಕಿದರು.

ನನ್ನ ಕ್ಷೇತ್ರದ ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಯಸಿದ್ದೇನೆ. ಕಡಿಮೆ ನೀರಿನಲ್ಲಿ ಬೆಳೆಗಳ ಅಗತ್ಯಕ್ಕೆ ಅನುಗುಣವಾಗಿ ನೀರು ಹರಿಸಿ ಹೆಚ್ಚಿನ ಇಳುವರಿ ಹೇಗೆ ಪಡೆಯಬಹುದು, ಬೆಳೆ ಬೆಳೆಯುವುದಕ್ಕೆ ಖಾತ್ರಿ, ಬೆಳೆ ನಷ್ಟವಾದರೂ ವಿಮೆಯಿಂದ ರಕ್ಷಣೆ ದೊರಕಿಸುವುದು. ಹೀಗೆ ಇವೆಲ್ಲವನ್ನೂ ರೈತರ ಅನುಕೂಲಕ್ಕಾಗಿ ತರುತ್ತಿದ್ದೇನೆ. ಈ ಭಾಗದ ರೈತರು ಇದೆಲ್ಲವನ್ನೂ ವಿವೇಚನೆಯಿಂದ ಯೋಚಿಸಬೇಕು. ಸರಿ-ತಪ್ಪುಗಳನ್ನು ವಿಮರ್ಶೆ ಮಾಡುವ ಮನೋಭಾವ ಬೆಳೆಸಿಕೊಂಡು ಒಮ್ಮತದಿಂದ ಸಾಮೂಹಿಕ ಕೃಷಿಗೆ ಮುಂದಾಗಬೇಕು. ಒಮ್ಮೆ ಇದರಲ್ಲಿ ರಾಜಕಾರಣ ಮಾಡಿದರೆ ನಿಮ್ಮ ಬದುಕೂ ಹಾಳು, ಯೋಜನೆಯೂ ಹಾಳಾಗಲಿದೆ ಎಂದು ಎಚ್ಚರಿಸಿದರು.

ಕೃಷಿ ವಿಜ್ಞಾನಿ ಡಾ.ಮಹದೇವು ಮಾತನಾಡಿ, ಬೀಜೋತ್ಪಾದನೆಗೆ ಅನುಕೂಲಕರವಾದ ವಾತಾವರಣ ಇಲ್ಲಿದೆ. ಪ್ರಸ್ತುತ ಮುಸುಕಿನ ಜೋಳಕ್ಕೆ ಅಂತಾರಾಷ್ಟ್ರೀಯ ಮಟ್ಟದವರೆಗೂ ಬೇಡಿಕೆ ಇದೆ. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕಾದರೆ ಸಾಮೂಹಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ. ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ಮುಂದೆ ಇದೇ ಕೃಷಿ ಪದ್ಧತಿಯನ್ನು ಅನುಸರಿಸುವುದು ಅನಿವಾರ್ಯವಾಗಲಿದೆ. ಹೊಸ ವಿಧಾನದ ಕೃಷಿ ಮಾಡುವುದರ ಮೂಲಕ ಕೃಷಿ ಪ್ರದೇಶವನ್ನು ಸುವರ್ಣಭೂಮಿಯನ್ನಾಗಿ ಪರಿವರ್ತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಶ್ರೀಪಾದು ಮತ್ತಿತರರಿದ್ದರು.