ಕಚೇರಿಗಳಿಗೆ ಅಲೆದು ಸೋತು ಸುಣ್ಣವಾದ ರೈತರು

| Published : Nov 24 2024, 01:45 AM IST

ಸಾರಾಂಶ

ಸೊರಬ ತಾಲೂಕಿನ ಶಿಗ್ಗಾ ಗ್ರಾಪಂ ಸಾಲಿನ ಗ್ರಾಮ ಸಭೆಯನ್ನು ನೋಡಲ್ ಅಧಿಕಾರಿ ಸಂಜಯ್ ಉದ್ಘಾಟಿಸಿದರು.

ಉಳವಿಯಲ್ಲಿ ನಾಡ ಕಚೇರಿ, ರಾಜಸ್ವ ನಿರೀಕ್ಷಕರ ಕಚೇರಿ, ಲೆಕ್ಕಿಗರ ಕಚೇರಿ ಒಂದೆಡೆ ಕಾರ್ಯನಿರ್ವಹಿಸುವಂತೆ ಗ್ರಾಮಸ್ಥರು ಆಗ್ರಹ ಕನ್ನಡಪ್ರಭ ವಾರ್ತೆ ಸೊರಬ

ಉಳವಿಯಲ್ಲಿ ಹೋಬಳಿ ಮಟ್ಟದ ನಾಡ ಕಚೇರಿ, ರಾಜಸ್ವ ನಿರೀಕ್ಷಕರ ಕಚೇರಿ ಹಾಗೂ ಗ್ರಾಮ ಲೆಕ್ಕಿಗರ ಕಚೇರಿಗಳ ಅಂತರ ಸರಿಸುಮಾರು 2 ರಿಂದ 3 ಕಿಮೀ ದೂರದಲ್ಲಿದ್ದು, ಕಡತ ಹಿಡಿದು ಕಚೇರಿಗಳಿಗೆ ಬರುವ ರೈತರು ವಾಹನ ಸೌಲಭ್ಯವಿಲ್ಲದೇ ಕಚೇರಿಗಳಿಗೆ ಅಲೆದು ದಣಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂರು ಕಚೇರಿಗಳು ಒಂದೇಡೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದರು.

ತಾಲೂಕಿನ ಶಿಗ್ಗಾ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆದ ಶಿಗ್ಗಾ ಗ್ರಾಪಂ 2024-25ನೇ ಸಾಲಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಳಲು ತೋಡಿಕೊಂಡರು.

ಉಳವಿ ಹೋಬಳಿ ಕೇಂದ್ರವಾಗಿದ್ದು, ಶಿಗ್ಗಾ ಸೇರಿದಂತೆ ಸುತ್ತಮುತ್ತಲಿನ 10 ರಿಂದ 15 ಗ್ರಾಮಗಳ ರೈತರು ತಮ್ಮ ಅಗತ್ಯ ದಾಖಲೆಗಳ ಸಲುವಾಗಿ ನಾಡ ಕಚೇರಿ, ರಾಜಸ್ವ ನಿರೀಕ್ಷಕರ ಕಚೇರಿ ಹಾಗೂ ಗ್ರಾಮ ಲೆಕ್ಕಿಗರ ಕಚೇರಿಗಳಿಗೆ ಅಲೆದು ದಣಿಯುವದರ ಜೊತೆಗೆ ಸಮಯ ವ್ಯರ್ಥವಾಗುತ್ತಿದೆ. ಈ ಬಗ್ಗೆ ಗ್ರಾಪಂ ಎಲ್ಲಾ ಕಚೇರಿಗಳು ಒಂದೆಡೆ ಕಾರ್ಯನಿರ್ವಹಿಸುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ರೈತರು, ವಯೋ ವೃದ್ಧರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.

ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಕುರಿ ಕೊಟ್ಟಿಗೆ ಮತ್ತು ದನದ ಕೊಟ್ಟಿಗೆಗಳನ್ನು ನಿರ್ಮಿಸಿಕೊಳ್ಳಲು ಸಣ್ಣ ಹಿಡುವಳಿ ಪ್ರಮಾಣಪತ್ರದ ಅವಶ್ಯಕತೆ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ರೈತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗಿವೆ. ಆದರೆ ತಂದೆಯ ಜಮೀನು ಭಾಗ ಮಾಡಿಕೊಂಡಿರುವುದಿಲ್ಲ. ಆದರೆ ಆ ರೈತರು ವಾಸ್ತವವಾಗಿ ಸಣ್ಣ ರೈತರಾಗಿರುತ್ತಾರೆ ಅಂತವರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸಣ್ಣ ಹಿಡುವಳಿ ಪ್ರಮಾಣಪತ್ರ ಕಡ್ಡಾಯಗೊಳಿಸಬಾರದು ಎಂದು ಸರ್ಕಾರಕ್ಕೆ ಗ್ರಾಮ ಸಭೆಯ ಮೂಲಕ ಮನವಿ ಸಲ್ಲಿಸುವಂತೆ ಚರ್ಚಿಸಲಾಯಿತು.

ಪಿಡಿಒ ಜಗದೀಶ್ ಮಾತನಾಡಿ, ರೈತರು ಮತ್ತು ಸಾರ್ವಜನಿಕರು ನೀಡಿರುವ ದೂರನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ನೋಡಲ್ ಅಧಿಕಾರಿ ಹಾಗೂ ಸೊರಬ ವಲಯ ಅರಣ್ಯ ಅಧಿಕಾರಿ ಸಂಜಯ್ ಗ್ರಾಮಯನ್ನು ಸಭೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸೋಮಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯರಾದ ಎಸ್.ಪ್ರಭಾಕರ, ಪ್ರೇಮ, ಸುಶೀಲಮ್ಮ, ನಾಗಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಪಶು ಇಲಾಖೆಯ ಪ್ರಭು, ಆರೋಗ್ಯ ಇಲಾಖೆಯ ವೀಣಾ, ಕೃಷಿ ಇಲಾಖೆಯಿಂದ ಯುವರಾಜ್, ಮಂಜುನಾಥ್, ಗ್ರಾಮ ಲೆಕ್ಕಿಗ ಮಂಜಪ್ಪ, ಪಂಚಾಯತ್‌ರಾಜ್ ಹಾಗೂ ನರೇಗಾ ಅಭಿಯಂತರ ಸಂದೀಪ್, ಪ್ರದೀಪ್, ಪ್ರಶಾಂತ್ ಭಾಗವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸುಧಾ ಪ್ರಾರ್ಥಿಸಿದರು.

ಗ್ರಾಮಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲು ನೋಟಿಸ್‌ ಜಾರಿಗೆ ಆಗ್ರಹ

ಶಿಗ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ರೋಗಿಗಳಿಗೆ ಸರಿಯಾಗಿ ಲಭಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಗ್ರಾಮ ಸಭೆಗೆ ಇಲಾಖೆ ಅಧಿಕಾರಿಗಳು ಭಾಗವಹಿಸಿತ್ತಿಲ್ಲ, ಹಾಗಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವಂತೆ ಗ್ರಾಪಂ ನೋಟೀಸ್ ಜಾರಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.