ಸಾರಾಂಶ
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ವಿಜಯನಗರ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಹಾಳಾಗಿದೆ. ಕೂಡ್ಲಿಗಿ ತಾಲೂಕಿನಲ್ಲೇ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಕೈಕೊಟ್ಟಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚು ಶೇಂಗಾ ಬೆಳೆಯಲಾಗುತ್ತದೆ. ಆದರೆ ಈ ಬಾರಿ ರೈತರು ಮಳೆ ಇಲ್ಲದೆ ಭಾರಿ ನಷ್ಟ ಅನುಭವಿಸುವಂತಾಗಿದೆ.
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಭೀಕರ ಬರಗಾಲದಲ್ಲಿ ಶೇಂಗಾ ಬೆಳೆಯಾದರೂ ಕೈಹಿಡಿಯಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಶೇಂಗಾ ಗಿಡದಲ್ಲಿ 40 ಕಾಯಿಗಳ ಬದಲಿಗೆ ಬರೀ ನಾಲ್ಕೈದು ಕಾಯಿಗಳು ಮಾತ್ರ ಇದ್ದು, ಇದನ್ನು ಕಂಡು ರೈತರು ಹೌಹಾರಿದ್ದಾರೆ!
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚು ಶೇಂಗಾ ಬೆಳೆಯಲಾಗುತ್ತದೆ. ಪಕ್ಕದ ತಾಲೂಕುಗಳಾದ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳ ಪ್ರಭಾವದಿಂದ ಮೊದಲಿನಿಂದಲೂ ಈ ಭಾಗದ ರೈತರು ಶೇಂಗಾ ಬೆಳೆ ಮೇಲೆ ಬಲು ಪ್ರೀತಿ. ಒಂದು ಕಾಲದಲ್ಲಿ ಎಣ್ಣೆ ಮಿಲ್ಲುಗಳಿಗೆ ಚಳ್ಳಕೆರೆ ಹೆಸರುವಾಸಿಯಾಗಿತ್ತು. ಹಾಗಾಗಿ ಕೂಡ್ಲಿಗಿಯಲ್ಲಿ ಬೆಳೆದ ಶೇಂಗಾ ಚಳ್ಳಕೆರೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಈಗ ಮಾರುಕಟ್ಟೆ ವಿಸ್ತರಣೆಯಾಗಿದ್ದು, ಶೇಂಗಾ ಖರೀದಿಗೆ ಜಮೀನುಗಳಿಗೆ ದಲ್ಲಾಳಿಗಳು ಆಗಮಿಸುವುದರಿಂದ ಶೇಂಗಾ ಬೆಳೆದು ರೈತರು ನಾಲ್ಕು ಕಾಸು ಕಾಣುತ್ತಿದ್ದರು. ಆದರೆ, ಈಗ ಭೀಕರ ಬರಗಾಲದ ಹೊಡೆತಕ್ಕೆ ಸಾಲ-ಸೋಲ ಮಾಡಿ ಬೆಳೆದಿದ್ದ ಶೇಂಗಾ ಗಿಡಗಳಲ್ಲಿ ಕಾಯಿಗಳೇ ಇಲ್ಲದಂತಾಗಿದೆ.ಸಕಾಲಕ್ಕೆ ಬಾರದ ಮಳೆ:
ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ತೀರಾ ಕಡಿಮೆ ಮಳೆ ಬಿದ್ದಿದೆ. ಶೇಂಗಾ ಬೆಳೆಗೆ ಸಕಾಲಕ್ಕೆ ಮಳೆ ಬಾರದ್ದರಿಂದ ಈಗ ಗಿಡಗಳಲ್ಲಿ ಕಾಯಿ ಕೂಡ ಇಲ್ಲದಂತಾಗಿದೆ. ಒಂದೆರಡು ಭಾರೀ ಮಳೆ ಬಿದ್ದಿದ್ದರೂ ಶೇಂಗಾ ಬೆಳೆ ಗೆದ್ದು ಬಿಡುತ್ತಿತ್ತು. ಈ ಬೆಳೆಯಿಂದ ರೈತರ ಎತ್ತುಗಳು, ದನಕರುಗಳಿಗೂ ಮೇವು ಆಗುತ್ತಿತ್ತು. ಜತೆಗೆ ರೈತರಿಗೂ ಬಂಪರ್ ಲಾಭ ತಂದುಕೊಡುತ್ತಿತ್ತು. ಹಾಗಾಗಿ ಬಡವರ ಬಾದಾಮಿ ಎಂದೇ ಖ್ಯಾತಿ ಗಳಿಸಿರುವ ಶೇಂಗಾ ಹಿಂದೆ ರೈತರು ಬಿದ್ದಿದ್ದಾರೆ. ಈಗ ವರುಣನ ಅವಕೃಪೆಯಿಂದ ಇತ್ತ ಬೆಳೆಯೂ ಇಲ್ಲದೇ, ಅತ್ತ ಸಾಲವೂ ತೀರಿಸಲಾಗದೇ ರೈತರು ಕಂಗಾಲಾಗಿದ್ದಾರೆ.34 ಸಾವಿರ ಹೆಕ್ಟೇರ್ ಶೇಂಗಾ ಬೆಳೆ ಹಾಳು:
ವಿಜಯನಗರ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಆರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳು ಕೈಕೊಟ್ಟ ಬಳಿಕ ರೈತರು ಶೇಂಗಾ ಬೆಳೆಯತ್ತ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು. ಆದರೆ, ಕಾಯಿ ಕಟ್ಟುವ ಹಂತದಲ್ಲೇ ಮಳೆ ಇಲ್ಲದ್ದರಿಂದ ಬೆಳೆ ಹಾಳಾಗಿದೆ. ಕೆರೆಗಳು ತುಂಬದ್ದರಿಂದ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್‌ಗಳಲ್ಲೂ ನೀರು ದೊರೆಯದಂತಾಗಿದೆ. ಹಾಗಾಗಿ ಕೃಷಿ ಪಂಪ್‌ಸೆಟ್‌ಗಳಿಂದ ನೀರು ಹಾಯಿಸಲು ಆಗದೇ ರೈತರು ಪರಿತಪಿಸುವಂತಾಗಿದೆ.ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಹಾಳಾಗಿದೆ. ಕೂಡ್ಲಿಗಿ ತಾಲೂಕಿನಲ್ಲೇ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಕೈಕೊಟ್ಟಿದೆ. ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ಶೇಂಗಾ ಬೆಳೆ ಆಸರೆಯಾಗಲಿದೆ ಎಂದು ಎಣಿಕೆ ಹಾಕಿಕೊಂಡಿದ್ದ ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇತ್ತ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ಅಧ್ಯಯನ ಮಾಡಿಕೊಂಡು ಹೋದರೂ ಇನ್ನೂ ರೈತರ ಖಾತೆಗಳಿಗೆ ಬರ ಪರಿಹಾರದ ಮೊತ್ತ ಬಂದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವ ಪರಿಹಾರದ ಮೊತ್ತದತ್ತ ರೈತರು ಎದುರು ನೋಡುವಂತಾಗಿದೆ. ವಿಜಯನಗರ ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ. ಈ ಪೈಕಿ ಕೂಡ್ಲಿಗಿ ತಾಲೂಕಿನಲ್ಲೇ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದು, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ ಕಾಯಿಗಳು ಸರಿಯಾಗಿ ಬಿಟ್ಟಿಲ್ಲ. ಕೇಂದ್ರ ಬರ ಅಧ್ಯಯನ ತಂಡ ಕೂಡ ಜಿಲ್ಲೆಗೆ ಆಗಮಿಸಿ ವೀಕ್ಷಣೆ ಮಾಡಿಕೊಂಡು ಹೋಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಹೇಳುತ್ತಾರೆ.ವಿಜಯನಗರ ಜಿಲ್ಲೆ ಸಂಪೂರ್ಣ ಬರಗಾಲದಿಂದ ತತ್ತರಿಸಿದೆ. ಭೀಕರ ಬರಗಾಲಕ್ಕೆ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಶೇಂಗಾ ಬೆಳೆಯೂ ಕೈಕೊಟ್ಟಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ರೈತರಿಗೆ ಬರ ಪರಿಹಾರ ನೀಡಬೇಕು. ನೇರ ಅವರ ಖಾತೆಗೆ ಜಮೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಗಾಳೆಪ್ಪ ಆಗ್ರಹಿಸುತ್ತಾರೆ.