ಸಾರಾಂಶ
ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಚ್ಚೆ ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಒಕ್ಕೂಟದ ವತಿಯಿಂದ ಗುರುವಾರ (ಮಾ.೬)ರಂದು ಬೆಳಗ್ಗೆ ೧೦.೩೦ಕ್ಕೆ ಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ತಿಳಿಸಿದರು.

ರೈತ ವಿರೋಧಿ ನೀತಿ ಅನುಸರಿಸುವ ಸರ್ಕಾರಗಳಿಂದ ರೈತನ ಸಾಲದ ಹೊರೆ ಹೆಚ್ಚಾಗಿ, ದುಡಿಯುವ ವರ್ಗದ ಆರ್ಥಿಕ ಶಕ್ತಿ ಬಲವರ್ಧನೆಗೆ ಯಾವುದೇ ಭರವಸೆ ಇಲ್ಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.ಕೃಷಿ ಚಟುವಟಿಕೆಗೆ ಅಗತ್ಯ ವಸ್ತುಗಳು, ಉಪಕರಣಗಳ ಬೆಲೆ ಹೆಚ್ಚಾಗಿದ್ದು ಅವುಗಳ ಮೇಲೆ ಜಿಎಸ್‌ಟಿ ಹೊರೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯದಿರುವುದು ಮತ್ತಿತರ ಕಾರಣಗಳಿಂದಾಗಿ ಕೃಷಿ ಉದ್ದೇಶದ ಜಮೀನು ಶೇ.೫೮ರಷ್ಟು ಕ್ಷೀಣಿಸಿದೆ. ರೈತರ ಮಕ್ಕಳು ಬದುಕು ಕಟ್ಟಿಕೊಳ್ಳಲಾಗದೆ ವೈವಾಹಿಕ ಜೀವನದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಕೃಷಿ ಅವನತಿಯತ್ತ ಸಾಗುತ್ತಿರುವ ಹಿನ್ನೆಲೆ ಹೋರಾಟದ ಅನಿವಾರ್ಯತೆ ಹೆಚ್ಚಿದ್ದು, ರಾಜ್ಯ ಸರ್ಕಾರ ಹಾಲಿ ಬಜೆಟ್‌ನಲ್ಲಿ ಕೃಷಿ ಬಜೆಟ್ ಮಂಡನೆ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ, ಸರಳ ರೂಪದಲ್ಲಿ ಸಾಲ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ಅಕ್ರಮ- ಸಕ್ರಮ ಅರ್ಜಿ ಸಲ್ಲಿಸಲು ಅವಕಾಶ, ವಿದ್ಯುತ್ ಸಂಪರ್ಕ, ಹಾಲಿನ ದರ, ಪ್ರೋತ್ಸಾಹ ಧನ ಹೆಚ್ಚಳ, ಕಬ್ಬು ಉತ್ಪಾದನಾ ವೆಚ್ಚ ಆದರಿಸಿ ಟನ್ ಒಂದಕ್ಕೆ ೫೦೦೦ ರು. ಎಫ್‌ಆರ್‌ಪಿ ನೀಡುವಂತೆ ಒತ್ತಾಯಿಸಿದರು.ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ರೈತ ಕಾರ್ಯಕರ್ತರು ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ಬರುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮೂಲ ಸಂಘಟನೆ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಾಧ್ಯಮ ಕಾರ್ಯದರ್ಶಿ ಸೊ.ಸಿ.ಪ್ರಕಾಶ್, ಜವರೇಗೌಡ, ಸುರೇಶ್, ಚಂದ್ರಶೇಖರ್ ಇದ್ದರು.