ಯುವ ಸಮೂಹವನ್ನು ವಿಜ್ಞಾನದ ಕಡೆಗೆ ಸೆಳೆಯಬೇಕಿದೆ

| Published : Mar 05 2025, 12:32 AM IST

ಯುವ ಸಮೂಹವನ್ನು ವಿಜ್ಞಾನದ ಕಡೆಗೆ ಸೆಳೆಯಬೇಕಿದೆ
Share this Article
  • FB
  • TW
  • Linkdin
  • Email

ಸಾರಾಂಶ

, ಅನೇಕರಿಗೆ ವಿಜ್ಞಾನ ದಿನಾಚರಣೆಯ ಕಾರಣವೇ ತಿಳಿದಿಲ್ಲ. ಹೀಗಾಗಿ, ಯುವ ಸಮೂಹಕ್ಕೆ ವಿಜ್ಞಾನದ ಕುರಿತು ಕುತೂಹಲ ಮೂಡಿಸುವ ಬಗ್ಗೆ ಯೋಜನೆ ರೂಪಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಸಮೂಹವನ್ನು ವಿಜ್ಞಾನದ ಕಡೆಗೆ ಸೆಳೆಯುವ ಹಾಗೂ ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಿದೆ ಎಂದು ಬೆಂಗಳೂರಿನ ಸಿಎಸ್ಐಆರ್‌– ಸಿಐಎಂಎಪಿ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ದಿನೇಶ್‌ ಎ. ನಾಗೇಗೌಡ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಭೌತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸಿಐಕ್ಯೂಎ ಸಂಯುಕ್ತವಾಗ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕರಿಗೆ ವಿಜ್ಞಾನ ದಿನಾಚರಣೆಯ ಕಾರಣವೇ ತಿಳಿದಿಲ್ಲ. ಹೀಗಾಗಿ, ಯುವ ಸಮೂಹಕ್ಕೆ ವಿಜ್ಞಾನದ ಕುರಿತು ಕುತೂಹಲ ಮೂಡಿಸುವ ಬಗ್ಗೆ ಯೋಜನೆ ರೂಪಿಸಬೇಕು ಎಂದರು.

ಸಿ.ವಿ. ರಾಮನ್‌ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ನೊಬೆಲ್‌ ಪುರಸ್ಕಾರ ಪಡೆದರು. ಆದರೆ, ಸ್ವಾತಂತ್ರ್ಯ ದೊರೆತ ಬಳಿಕ ದೇಶದ ಯಾರೊಬ್ಬರೂ ಈ ಸಾಧನೆ ಮಾಡಿಲ್ಲ ಎಂಬುದು ವಿಪರ್ಯಾಸ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಜ್ಞಾನ ಸಂಶೋಧನೆಗೆ ಮಹತ್ವ ನೀಡಿ ಪ್ರೋತ್ಸಾಹಧನ ನೀಡುತ್ತಿದ್ದು, ವಿವಿಧ ವೈಜ್ಞಾನಿಕ ಸಂಸ್ಥೆಗಳೂ ಸಹಕಾರ ನೀಡುತ್ತಿದೆ ಎಂದು ಅವರು ಹೇಳಿದರು.

ವಿಜ್ಞಾನದ ಮೇಲೆ ಹೂಡಿಕೆ ಮಾಡಿದ ದೇಶಗಳು ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಭಾರತದಲ್ಲೂ ಸಂಶೋಧಕರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಾಗ ರಾಷ್ಟ್ರದ ಬೆಳವಣಿಗೆಯ ವೇಗ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.

ನಮ್ಮ ಸಂಸ್ಥೆಯು ಔಷಧೀಯ ಸಸ್ಯಗಳ ಬೆಳವಣಿಗೆಯ ಹಾದಿಯ ಕುರಿತು ಸಂಶೋಧನೆ ಮಾಡುತ್ತಿದೆ. ದೇಶದಲ್ಲಿ ಅನೇಕ ಮರ ಹಾಗೂ ಗಿಡಗಳನ್ನು ಔಷಧ ಮತ್ತು ಸುಗಂಧ ದ್ರವ್ಯಕ್ಕಾಗಿ ಬಳಸುತ್ತಾರೆ. ಆದರೆ, ಕೆಲವು ಗಿಡಗಳು ಉಪಯೋಗದ ಹಂತಕ್ಕೆ ಬರಲು ಅನೇಕ ವರ್ಷ ಕಾಯಬೇಕಾಗುತ್ತದೆ. ಶ್ರೀಗಂಧದ ಮರದಿಂದ ಎಣ್ಣೆ ತೆಗೆಯಲು 20 ವರ್ಷ ಕಾಯಬೇಕಾಗುತ್ತದೆ. ಹೀಗಾಗಿ, ಅವುಗಳಿಂದ ಬೇಗನೆ ಉಪಯೋಗ ಪಡೆಯಲು ತಂತ್ರಜ್ಞಾನ ಬಳಸಿ ವಿವಿಧ ಸಂಶೋಧನೆ ನಡೆಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಹಣಕಾಸು ಅಧಿಕಾರಿ ಪ್ರೊ.ಎಸ್‌. ನಿರಂಜನ್‌ ರಾಜ್, ವಿಜ್ಞಾನ ವಿಭಾಗದ ನಿರ್ದೇಶಕಿ ಸುನೀತಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್‌.ವಿ. ನಿರಂಜನ, ಸಿಐಕ್ಯೂಎ ಸಂಯೋಜಕ ಡಾ.ವಿ. ಮಹೇಶ, ಉಪ ನಿರ್ದೇಶಕ ಡಾ.ಸಿ.ಎಸ್. ಮಂಜುನಾಥ ಮೊದಲಾದವರು ಇದ್ದರು.