ಸರ್ಕಾರಗಳು ರೈತರ ಸಮಸ್ಯೆಗಳನ್ನು ಆಲಿಸುವ ಪರಿಸ್ಥಿತಿಯಲ್ಲಿ ಇಲ್ಲ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳಿಂದ ಹಣ ಬರುತ್ತಿರುವ ಕಾರಣ, ಸರ್ಕಾರಗಳು ಅವರ ಪರವಾಗಿ ಕೆಲಸ ಮಾಡುತ್ತಿವೆ.

ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರು ಸುತ್ತಮುತ್ತ ಟೌನ್‌ಶಿಪ್ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳ ವಿರುದ್ಧ ರೈತರು ಗಟ್ಟಿಯಾಗಿ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ರೈತರಿಗೆ ಉಳಿಗಾಲವೇ ಇರುವುದಿಲ್ಲ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಎಚ್ಚರಿಕೆ ನೀಡಿದರು.

ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ಹೊಸಹಳ್ಳಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಗಳು ರೈತರ ಸಮಸ್ಯೆಗಳನ್ನು ಆಲಿಸುವ ಪರಿಸ್ಥಿತಿಯಲ್ಲಿ ಇಲ್ಲ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳಿಂದ ಹಣ ಬರುತ್ತಿರುವ ಕಾರಣ, ಸರ್ಕಾರಗಳು ಅವರ ಪರವಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ರೈತ ಸಂಘಟನೆಗಳು ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವುದರಿಂದಲೇ ರೈತರ ಹಕ್ಕುಗಳು ಸ್ವಲ್ಪಮಟ್ಟಿಗೆ ಉಳಿದಿವೆ. ರೈತ ಸಂಘಟನೆಗಳ ಹೋರಾಟ ಇಲ್ಲದಿದ್ದರೆ ಸರ್ಕಾರಗಳು ಯಾವುದೇ ವಿರೋಧವಿಲ್ಲದೆ ಕಾರ್ಪೊರೇಟ್ ಸಂಸ್ಥೆಗಳಿಗೆ ಕೃಷಿ ಭೂಮಿ ಹಸ್ತಾಂತರಿಸುತ್ತಿದ್ದವು, ರೈತರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದಾಗ ಮಾತ್ರ ಕೃಷಿ ಭೂಮಿ ಉಳಿಯುತ್ತದೆ. ಆದ್ದರಿಂದ ಭೂಸ್ವಾಧೀನದಂತಹ ವಿಚಾರಗಳಲ್ಲಿ ಎಲ್ಲ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ, ಉಪಾಧ್ಯಕ್ಷ ಬಿಸಲಹಳ್ಳಿ ಬೈಚೇಗೌಡ, ಬಯಲುಸೀಮೆ ಕಾರ್ಯದರ್ಶಿ ಪ್ರಭಾಕರ್ ಗೌಡ, ಜಿಲ್ಲಾ ಅಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಹಳ್ಳಿ ರಮೇಶ್, ಹಸಿರು ಸೇನೆ ರಾಜ್ಯ ಸಂಚಾಲಕ ಕೆ.ಆನಂದ್ ಕುಮಾರ್, ಮಹಿಳಾ ಸಂಚಾಲಕಿ ರಾಧಮ್ಮ, ಮುಖಂಡರಾದ ಚಿನ್ನಾಪುರ ಮಂಜುನಾಥ್, ತಿಮ್ಮರೆಡ್ಡಿ, ವೆಂಕಟಸ್ವಾಮಿರೆಡ್ಡಿ, ಕೃಷ್ಣಮೂರ್ತಿ, ಗೋಪಿನಾಥ್, ಸರಸ್ವತಮ್ಮ, ಗುರಪ್ಪ ಇದ್ದರು.