ರೈತರು 3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಅಗತ್ಯ

| Published : Jun 17 2024, 01:34 AM IST / Updated: Jun 17 2024, 12:41 PM IST

ರೈತರು 3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಸಮೀಪದ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ಶಿಕ್ಷಣ ಶಾಲಾ ವಿದ್ಯಾರ್ಥಿಗಳಿಗೆ ಮಣ್ಣಿನ ಮಹತ್ವ, ಮಣ್ಣಿನ ಮಾದರಿಗಳ ಸಂಗ್ರಹಣೆ ವಿಧಾನಗಳ ತರಬೇತಿ ಕಾರ್ಯಕ್ರಮ ಜರುಗಿತು.

 ಯಾದಗಿರಿ ;  ರೈತರು ಕನಿಷ್ಠ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ ಫಲಿತಾಂಶ ಆಧಾರದ ಮೇಲೆ ರಸಗೊಬ್ಬರ ಬಳಕೆ ಮಾಡಿದರೆ ಮಣ್ಣಿನ ಆರೋಗ್ಯ ಉಳಿಯುವುದಲ್ಲದೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ಹೇಳಿದರು.

ಸಮೀಪದ ಬಂದಳ್ಳಿ ಗ್ರಾಮದ ಏಕಲವ್ಯ ಮಾದರಿ ಶಿಕ್ಷಣ ಶಾಲಾ ವಿದ್ಯಾರ್ಥಿಗಳಿಗೆ, ಮಣ್ಣಿನ ಮಹತ್ವ, ಮಣ್ಣು ಪರೀಕ್ಷೆಗೆಮಾದರಿ ಸಂಗ್ರಹ ವಿಧಾನಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವೇಚನೆ ಇಲ್ಲದೆ ಅತಿ ಹೆಚ್ಚು ರಸಗೊಬ್ಬರ ಬಳಸುವುದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದ್ದು. ಮಣ್ಣಿನಲ್ಲಿರುವ ಬಹುಪಯೋಗಿ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗಿ ಜನರಲ್ಲಿ ಅನೇಕ ರೋಗಗಳು ಬರುತ್ತಿವೆ ಎಂದರು.

ವಿದ್ಯಾರ್ಥಿಗಳಲ್ಲಿ ಮಣ್ಣಿನ ಮಹತ್ವ, ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಮಣ್ಣು ಪರೀಕ್ಷೆಯಿಂದ ಆಗುವ ಉಪಯೋಗ ಬಗ್ಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ 2024-25ನೇ ಸಾಲಿನಿಂದ ಶಾಲಾ ಮಣ್ಣು ಆರೋಗ್ಯ ಅಭಿಯಾನ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದರಡಿ ಜಿಲ್ಲೆ ಎರಡು ಶಾಲೆಗಳಾದ ಏಕಲವ್ಯ ಮಾದರಿ ಶಿಕ್ಷಣ ಶಾಲೆ ಬಂದಳ್ಳಿ ಮತ್ತು ಜವಾಹರ್ ನವೋದಯ ಮಹಾವಿದ್ಯಾಲಯ ಹೋತಪೇಟ್ ಆಯ್ಕೆ ಮಾಡಲಾಗಿದೆ. ಸರಕಾರ ಕಲ್ಪಿಸಿಕೊಟ್ಟ ಅವಕಾಶ ಸರಿಯಾಗಿ ಸದುಪಯೋಗಿಸಿಕೊಂಡು ಅಭಿವೃದ್ಧಿಗೆ ಪ್ರಯತ್ನ ಮಾಡೋಣ ಎಂದು ಹೇಳಿದರು.

ತರಬೇತಿಯಲ್ಲಿ ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರಾದ ಡಾ. ಹೊನ್ನಯ್ಯ, ತಾಲೂಕು ತಾಂತ್ರಿಕ ಸಹಾಯಕ ರವೀಂದ್ರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವೀಂದ್ರ ಬಡಿಗೇರ್, ಶಾಲಾ ಶಿಕ್ಷಕರಾದ ಬಸನಗೌಡ, ಮಲ್ಲಿಕಾರ್ಜುನ್, ಜಕ್ಕಪ್ಪ, ನಿರ್ಮಲಾ, ಬಸವಣ್ಣಪ್ಪ ಸೇರಿದಂತೆ ಇತರರಿದ್ದರು.