ಸಾರಾಂಶ
ಠೇವಣಿ ಸಂಗ್ರಹಿಸಿ ರೈತರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಠೇವಣಿ ಸಂಗ್ರಹಿಸಿ ರೈತರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತರು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಯಿತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು. ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯ ಕೊಡಿಸುವಂತೆ ಒಕ್ಕೊರಿಲಿನಿಂದ ಒತ್ತಾಯಿಸಿದರು.ಅಗ್ರೀಗೋಲ್ಡ್, ಪಿಎಸ್‌ಎಲ್ ನಂತಹ ಕಂಪನಿಗಳು ರೈತರಿಂದ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿವೆ. ರೈತರಿಗೆ ಮೋಸ ಮಾಡಿವೆ. ಬೆಳಗಾವಿ ಜಿಲ್ಲೆಯಲ್ಲಿ ₹3 ಕೋಟಿಗೂ ಅಧಿಕ ಹಣ ತೆಗೆದುಕೊಂಡು ರೈತರಿಗೆ ವಂಚನೆ ಮಾಡಿವೆ. ಇದರ ಹೊಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹೊರಬೇಕು. ಇಲ್ಲದಿದ್ದರೆ, ಸಂಸದರು, ಶಾಸಕರ ಮನೆಗಳ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾನಿರತ ರೈತರು ಎಚ್ಚರಿಕೆ ನೀಡಿದರು.
ಕಳೆದ 15-20 ವರ್ಷಗಳ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಖಾಸಗಿ ಕಂಪನಿಗಳು ರೈತರಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿವೆ. ಖಾಸಗಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಠೇವಣಿ ಕಳೆದುಕೊಂಡಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು. ರೈತ ಮುಖಂಡರಾದ ಚೂನಪ್ಪ ಪೂಜಾರಿ, ಶಿವಪುತ್ರ ಇತರರು ಪಾಲ್ಗೊಂಡಿದ್ದರು.