ಬಿಂದಿಗೆ ನೀರಿನಿಂದ ಬೆಳೆ ರಕ್ಷಿಸಿಕೊಳ್ಳುತ್ತಿರುವ ರೈತರು

| Published : Oct 26 2023, 01:00 AM IST

ಬಿಂದಿಗೆ ನೀರಿನಿಂದ ಬೆಳೆ ರಕ್ಷಿಸಿಕೊಳ್ಳುತ್ತಿರುವ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಾಗಿದ್ದರೆ ಮೆಣಸಿನಗಿಡದ ಬೆಳೆ ಭರ್ಜರಿಯಾಗಿಯೇ ಬರುತ್ತಿತ್ತು. ಈಗ ಕಾಯಿ ಬಿಡುತ್ತಿದೆ. ಆದರೆ, ತೇವಾಂಶ ಕೊರತೆಯಿಂದ ಬತ್ತಿರುವುದರಿಂದ ಕಾಯಿಕಟ್ಟಲು ಆಗುತ್ತಿಲ್ಲ. ಇದನ್ನು ನೋಡಿಕೊಂಡು ಸುಮ್ಮನೇ ಇರಲು ಆಗುತ್ತಿಲ್ಲ. ಹೇಗಾದರೂ ಮಾಡಿ ಈ ಬೆಳೆಯನ್ನೇ ಕಾಪಾಡಿಕೊಳ್ಳಲೇಬೇಕೆಂದು ರೈತರು ಪರಿಶ್ರಮ ಪಡುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳಭೀಕರ ಬರದಿಂದ ತತ್ತರಿಸಿದ ರೈತ ಸಮುದಾಯ ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಇಲ್ಲೊಬ್ಬ ರೈತ ಬಿಂದಿಗೆಯಿಂದ ನೀರು ಹಾಕಿ ಬೆಳೆ ಸಂರಕ್ಷಣೆ ಮಾಡುವ ಪ್ರಯತ್ನ ಮಾಡುತ್ತಿರುವುದು ಬರದ ತೀವ್ರತೆಗೆ ಹಿಡಿದ ಕನ್ನಡಿದಂತಾಗಿದೆ.

ಕುಕನೂರು ತಾಲೂಕಿನ ಯರೇಹಂಚಿನಾಳದ ರೈತ ದೇವಪ್ಪ ಕೋರ್ಲಗುಂದಿ ತಮ್ಮ ಹೊಲದಲ್ಲಿ ಒಂದೂವರೆ ಎಕರೆಯಲ್ಲಿ ಮೆಣಸಿನಗಿಡ, ಈರುಳ್ಳಿ ಬೆಳೆಸಿದ್ದಾರೆ. ಆದರೆ, ಈಗ ಮಳೆ ಕೊರತೆಯಿಂದ ಗಿಡಗಳು ಒಣಗುತ್ತಿವೆ. ಈಗಾಗಲೇ ಈರುಳ್ಳಿ ಬಹುತೇಕ ಒಣಗಿದೆ. ಮೆಣಸಿನಗಿಡಗಳನ್ನಾದರೂ ಕಾಪಾಡಿಕೊಳ್ಳೋಣ ಎಂದು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.

ನಾಲ್ಕಾರು ಕಿ.ಮೀ. ದೂರದಲ್ಲಿರುವ ಕೆರೆಗೆ ಬೈಕ್‌ನಲ್ಲಿ ಹೋಗಿ ನಾಲ್ಕು ಕೊಡಗಳಲ್ಲಿ ನೀರು ತುಂಬಿಕೊಂಡು ಬಂದು ಹೊಲಗಳಿಗೆ ಹಾಕುತ್ತಿದ್ದಾರೆ. ಬೈಕ್‌ನಲ್ಲಿ ನೀರು ತಂದು ಕೊಡುತ್ತಾರೆ. ಮನೆಯವರು ಕೊಡಗಳಲ್ಲಿನ ನೀರನ್ನು ಗಿಡಗಳಿಗೆ ಹಾಕುವ ದೃಶ್ಯ ಇಡೀ ಉತ್ತರ ಕರ್ನಾಟಕದ ಬರದ ಭೀಕರತೆಯನ್ನು ಎಳೆಎಳೆಯಾಗಿ ವಿವರಿಸುತ್ತದೆ.

ಇನ್ನೊಂದು ಮಳೆಯಾಗಿದ್ದರೆ ಮೆಣಸಿನಗಿಡದ ಬೆಳೆ ಭರ್ಜರಿಯಾಗಿಯೇ ಬರುತ್ತಿತ್ತು. ಈಗ ಕಾಯಿ ಬಿಡುತ್ತಿದೆ. ಆದರೆ, ತೇವಾಂಶ ಕೊರತೆಯಿಂದ ಬತ್ತಿರುವುದರಿಂದ ಕಾಯಿಕಟ್ಟಲು ಆಗುತ್ತಿಲ್ಲ. ಇದನ್ನು ನೋಡಿಕೊಂಡು ಸುಮ್ಮನೇ ಇರಲು ಆಗುತ್ತಿಲ್ಲ. ಹೇಗಾದರೂ ಮಾಡಿ ಈ ಬೆಳೆಯನ್ನೇ ಕಾಪಾಡಿಕೊಳ್ಳಲೇಬೇಕೆಂದು ರೈತರು ಪರಿಶ್ರಮ ಪಡುತ್ತಿದ್ದಾರೆ.

ದೇವರು ಕರುಣೆ ತೋರಲಿ: ಈಗಾಗಲೇ ಎಕರೆಗೆ ₹20 ಸಾವಿರ ಖರ್ಚು ಮಾಡಿದ್ದೇವೆ. ನಮಗೆ ಟ್ಯಾಂಕರ್ ಮೂಲಕ ನೀರು ತಂದು ಹಾಕುವಷ್ಟು ಶಕ್ತಿ ಇಲ್ಲ. ಬೈಕ್‌ನಲ್ಲಿಯೇ ಬೆಳಗ್ಗೆಯಿಂದ ಸಂಜೆಯವರೆಗೂ ನೀರು ತಂದು ಕೊಡುತ್ತೇನೆ. ನಮ್ಮ ಕುಟುಂಬದ ಇತರೆ ಸದಸ್ಯರು ಹಾಗೂ ಆಳುಗಳ ಮೂಲಕ ಪ್ರತಿ ಗಿಡಕ್ಕೂ ನೀರು ಹಾಕುವ ಪ್ರಯತ್ನ ಮಾಡುತ್ತಿದ್ದೇವೆ. ದೇವರು ಇನ್ನಾದರೂ ನಮ್ಮ ಮೇಲೆ ಕರುಣೆ ತೋರಿಯಾನು ಎನ್ನುವ ಮೂಲಕ ಬರದ ಬವಣೆ ತೆರೆದಿಡುತ್ತಾರೆ ರೈತರು.

ಇದು ಕೇವಲ ಇವರೊಬ್ಬರ ಕತೆಯಲ್ಲ, ರೈತರು ಬೆಳೆ ಕಾಪಾಡಿಕೊಳ್ಳಲು ಹರಸಾಹಸ ಹಲವು. ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ. ಹೊಲದಲ್ಲಿನ ಕೃಷಿ ಹೊಂಡದಿಂದಲೂ ಕೆಲವರು ಆಯಿಲ್ ಎಂಜಿನ್ ಬಳಕೆ ಮಾಡಿ, ನೀರು ಹಾಯಿಸುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದ ಏರಿಯಾದಲ್ಲಿ ಸುತ್ತಾಡಿದರೆ ಸಾಕು ಇಂಥ ಸಾಲುಸಾಲು ಪ್ರಯತ್ನಗಳು ಕಾಣಸಿಗುತ್ತವೆ. ಈ ವರ್ಷ ಬರದಿಂದ ನೊಂದು ಹೋಗಿರುವ ರೈತರು ಮಾತ್ರ ಕಣ್ಣೀರು ಹಾಕುತ್ತಲೇ ಬೆಳೆ ಸಂರಕ್ಷಣೆ ಮಾಡುವುದು ಸಾಮಾನ್ಯವಾಗಿದೆ. ಇದನ್ನು ನೋಡಿದರೆ ಎಂಥವರ ಕಣ್ಣಲ್ಲಿ ನೀರು ಬರುವುದಂತೂ ಗ್ಯಾರಂಟಿ.