ಸಾರಾಂಶ
ಹೂವಿನಹಡಗಲಿ: ತಾಲೂಕಿನ ಕೊಂಬಳಿ ಗ್ರಾಮದಲ್ಲಿ ಕಬ್ಬು ಬೆಳೆಗಾರರು ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆ ವಿರುದ್ಧ ಟ್ರ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರ ಸೊಪ್ಪಿನ ಪ್ರಭು ಮಾತನಾಡಿ, ರೈತರು 12 ತಿಂಗಳುಗಟ್ಟಲೆ ಕಬ್ಬು ಬೆಳೆದು ಕಟಾವಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಇದು ನಮ್ಮ ದೌರ್ಭಾಗ್ಯ. ವಿಜಯನಗರ ಸಕ್ಕರೆ ಕಾರ್ಖಾನೆ ಮಾಲೀಕರು ಸಕಾಲದಲ್ಲಿ ಕಬ್ಬು ಕಟಾವು ಮಾಡದಿರುವ ಹಿನ್ನೆಲೆ ಇಳುವರಿ ಕುಂಠಿತಗೊಂಡು ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಕಾರ್ಖಾನೆಯ ಕಿರುಕುಳಕ್ಕೆ ರೈತರು ಕಬ್ಬು ಬೆಳೆಯಲು ಯಾರೂ ಪ್ರಯತ್ನಿಸುತ್ತಿಲ್ಲ. ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆ ಕಡಿಮೆಯಾಗಿದೆ ಎಂದರು.ಕಬ್ಬು ಕಟಾವಿಗೆ ರೈತರೇ ಹಣ ನೀಡಬೇಕಿದೆ. ಸಾಗಾಣಿಕೆ ಕಾರಣಕ್ಕಾಗಿ ಕೆಲಸಗಾರರು ಬರುತ್ತಿಲ್ಲ. ವಿದ್ಯುತ್ ಸಮಸ್ಯೆ, ನದಿಯಲ್ಲಿ ನೀರಿಲ್ಲ. ಇಳುವರಿ ಕುಂಠಿತಗೊಳ್ಳುತ್ತಿದೆ. ರೈತರ ಮಧ್ಯೆಯೇ ತಾರತಮ್ಯ ಮಾಡುತ್ತಾರೆ. ದೂರದ ಊರಿನ ಗ್ರಾಮಗಳ ಕಬ್ಬು ಕಟಾವಿಗೆ ವಿಳಂಬ ಮಾಡುತ್ತಾರೆ. ಕಾರ್ಖಾನೆ ಮಾಲೀಕರ ಬಳಿ ಗೊಬ್ಬರ ತಂದರೆ ಬಡ್ಡಿ ಹಾಕುತ್ತಾರೆ. ಕಬ್ಬು ಕಟಾವು ತಡವಾದರೆ ಅದಕ್ಕೆ ಯಾವ ಬಡ್ಡಿ ಇಲ್ಲ. 4 ತಿಂಗಳಾದರೂ ಕಟಾವು ಮಾಡುತ್ತಿಲ್ಲ. ಕಾರ್ಖಾನೆಯವರ ಮಾತನ್ನೆ ಕೆಲಸಗಾರರು ಕೇಳುತ್ತಿಲ್ಲ. ಕಬ್ಬು ಬೆಳೆಯನ್ನು ಇನ್ನು ಮುಂದಿನ ದಿನಗಳಲ್ಲಿ ಬೆಳೆಯುವುದಿಲ್ಲ. ಇದರಿಂದ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ನಮ್ಮ ನೋವು ಯಾರೂ ಕೇಳುತ್ತಿಲ್ಲವೆಂದರು.
ರೈತರ ಜಮೀನುಗಳಿಗೆ ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕಳಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. 12 ತಿಂಗಳಿಗೆ ಕಟಾವಾಗಬೇಕಿದ್ದ ಕಬ್ಬು 14 ತಿಂಗಳು ಕಳೆದರೂ ಕಟಾವು ಮಾಡುತ್ತಿಲ್ಲ. ಟನ್ನಿಗೆ 100ರಿಂದ 150 ನಾವೇ ನೀಡುತ್ತೇವೆ. ಉಳಿದ ಹಣವನ್ನು ಕಾರ್ಖಾನೆ ಮಾಲಿಕರೇ ಕೊಡಬೇಕೆಂದು ಪಟ್ಟು ಹಿಡಿದರು.ರೈತರಿಗೆ ಸರ್ಕಾರ ನಿಗದಿ ಮಾಡಿದ ಹಣವನ್ನು ನೀಡಬೇಕು. ಅದರಲ್ಲಿ ಕಟಿಂಗ್ ಮತ್ತು ಇತರೆ ಬೇರೆ ಕಬ್ಬು ಸಾಗಾಣಿಕೆ ಮಾಡುತ್ತಾರೆ. ಆದ ನಂತರ ಕಾರ್ಖಾನೆ ಸಿಬ್ಬಂದಿ ಏನಾದರೂ ಕೇಳಿದರೇ ರೈತರನ್ನೇ ಗದರಿಸಿ ಕಳುಹಿಸುತ್ತಾರೆ. ಕಬ್ಬು ಸಾಗಾಣಿಕೆಯ ಏರಿಯಾ ಮ್ಯಾನೇಜರ್ ಕೃಷ್ಣನಾಯ್ಕ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಕಾರ್ಖಾನೆಯ ಎಜಿಎಂ ಮಂಜುನಾಥ ಮಾತನಾಡಿ, ಮೊದಲು ಕಬ್ಬು ನಾಟಿ ಮಾಡಿರುವ ರೈತರನ್ನು ಕಬ್ಬನ್ನು ಕಟಾವು ಮಾಡುತ್ತಿದ್ದೇವೆ. ಕೊಂಬಳಿ ಭಾಗದಲ್ಲಿ 14 ತಿಂಗಳ ಕಬ್ಬು ಇಲ್ಲ. ಈ ವರ್ಷ ಅಕ್ಟೋಬರ್ ಮೊದಲ ವಾರ ಕಾರ್ಖಾನೆ ಪ್ರಾರಂಭ ಮಾಡುವುದು ವಾಡಿಕೆ. ಸರ್ಕಾರದ ಆದೇಶದಂತೆ ನ. ೧ರಿಂದ ಕಾರ್ಖಾನೆ ಪ್ರಾರಂಭ ಮಾಡಿದ್ದೇವೆ. ರೈತರ ಮನವಿಗೆ ಅ. 26ಕ್ಕೆ ಅನುಮತಿ ನೀಡಿದರು. ಆ ಸಂದರ್ಭದಲ್ಲೇ ಕಾರ್ಖಾನೆ ಆರಂಭಿಸಿದ್ದೇವೆ. ಈಗಾಗಲೇ 2.50 ಲಕ್ಷ ಟನ್ ಕಬ್ಬು ಅರೆಯಲಾಗಿದೆ ಎಂದರು.ಕೊಂಬಳಿ ಭಾಗದಲ್ಲಿ 5300 ಟನ್ ಕಬ್ಬು ಇದೆ. 60 ದಿನಗಳಲ್ಲಿ ಕಟಾವು ಮಾಡುತ್ತೇವೆ. ಕೆಲಸಗಾರರು ಸಾಲುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇಲ್ಲಿ ಉಳಿದ ಕಬ್ಬನ್ನು ಕಟಾವು ಮಾಡಲು ಕೆಲಸಗರಾರ ಬ್ಯಾಚ್ ಕಳುಹಿಸಿ ಎಂದು ಮನವಿ ನೀಡಿದ್ದೀರಿ. ಅದರಂತೆ ನಾವು ಬೇರೆ ಕಡೆ ಹೋದ ಬ್ಯಾಚ್ ಬಂದ ತಕ್ಷಣ ಇಲ್ಲಿ ಕಟಾವು ಮಾಡಲಾಗುವುದು. ಮಶಿನ್ ತರಿಸಲಾಗಿದೆ. ಅದರಂತೆ ಮಶಿನ್ ನಿಂದ ಕಟಾವು ಮಾಡಲಾಗುವುದು. ಪ್ರತಿದಿನ 100 ಟನ್ ಕಟಾವು ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡುತ್ತೇವೆ. ಕಾರ್ಖಾನೆಯು ಸಾಮರ್ಥ್ಯ ಮೀರಿ ಕಬ್ಬನ್ನು ಅರೆಯುತ್ತಿದ್ದೇವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾರ್ಖಾನೆಗಳು ಬಂದ್ ಆಗಿದ್ದು, ಅಲ್ಲಿಯ ಕೆಲಸಗಾರರನ್ನು ಕರೆಸಿ ಕಬ್ಬುಗಳನ್ನು ಕಟಾವು ಮಾಡುತ್ತೇವೆ. ಕಬ್ಬು ಸಾಗಾಣಿಕೆ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರ್ಲಹಳ್ಳಿ, ಸಿಂಗಟಾಲೂರು, ಹಮ್ಮಿಗಿ ಹಾಗೂ ಇತರೆ ಗ್ರಾಮಗಳ ಹೆಚ್ಚು ಭಾಗಗಳಲ್ಲಿ ಕಬ್ಬು ಕಟಾವು ಮಾಡಲಾಗುತ್ತಿದೆ. ನಮ್ಮ ಭಾಗದ ರೈತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಶಿವಪ್ಪ ಕಲ್ಲಹಳ್ಳಿ ಹೇಳಿದರು.ಮೂರು ದಿನದಲ್ಲಿ ಕಾರ್ಮಿಕರನ್ನು ಕಳುಹಿಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ರೈತರು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಎ. ವೀರಣ್ಣ, ಮಾಬುಸಾಬ್, ಗಡಿಗಿ ಕೃಷ್ಣಪ್ಪ, ವಿರೂಪಾಕ್ಷಿ, ರುದ್ರಗೌಡ, ವೀರನಗೌಡ ಸೇರಿದಂತೆ ಇತರರಿದ್ದರು.