ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರ ಪ್ರತಿಭಟನೆ
KannadaprabhaNewsNetwork | Published : Oct 20 2023, 01:01 AM IST
ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರ ಪ್ರತಿಭಟನೆ
ಸಾರಾಂಶ
ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರ ಪ್ರತಿಭಟನೆ
ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದ ರೈತರು, ಗುಣಮಟ್ಟದ ವಿದ್ಯುತ್ ನೀಡಲು ಆಗ್ರಹ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಅನಿಯಂತ್ರಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ನಗರದ ಮೆಸ್ಕಾಂ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಕರೆಯ ಮೇರೆಗೆ ಎಲ್ಲಾ ಘಟಕಗಳ ಮುಖಂಡರಾದ ಗುರುಶಾಂತಪ್ಪ, ಮಹೇಶ್ ಬಸವರಾಜಪ್ಪ ನೇತೃತ್ವದಲ್ಲಿ ರೈತರು ನಗರದ ರತ್ನಗಿರಿ ರಸ್ತೆಯಲ್ಲಿರುವ ಮೆಸ್ಕಾಂ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಿದರು. ಮನ ಬಂದಂತೆ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ರಾಜ್ಯ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿರುವ ರೈತ ವಿರೋಧಿ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು. ಪ್ರತಿಭಟನೆ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು. ಹಿಂದಿನ ಸರ್ಕಾರ ಮೂರು ಕರಾಳ ಮಸೂದೆಗಳನ್ನು ಜಾರಿಗೆ ತಂದು ರೈತ ವಿರೋಧಿ ನೀತಿ ಅನುಸರಿಸಿದ್ದರಿಂದ ರೈತರು ಆ ಸರ್ಕಾರವನ್ನೂ ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದು ಪ್ರಾರಂಭದಲ್ಲಿ ರೈತರಿಗೆ ಸಂಪೂರ್ಣವಾಗಿ ಉಚಿತವಾಗಿ ಗುಣಮಟ್ಟದ ವಿದ್ಯುತ್ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಹೇಳಿದರು. ಇದೀಗ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿದೆ. ಇನ್ನೊಂದೆಡೆ ಕೈಗಾರಿಕೋದ್ಯಮಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು. ನಗರ ಪ್ರದೇಶಗಳಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿರುವ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ರೈತರು ಕೃಷಿ ಪಂಪ್ ಸೆಟ್ ಅಳವಡಿಸಿಕೊಂಡು ಆಹಾರ ಉತ್ಪಾದನೆ ಮಾಡುವ ಮೂಲಕ ಸರ್ಕಾರಕ್ಕೆ ನೆರವಾಗಿದ್ದಾರೆ ಆದರೆ ರೈತರ ಪರವಾಗಿ ಕೆಲಸ ಮಾಡದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು. ರೈತರು ವಿದ್ಯುತ್ ಸಂಪರ್ಕ ಪಡೆಯುವ ಎಲ್ಲಾ ಖರ್ಚುಗಳನ್ನು ರೈತರೇ ಭರಿಸಬೇಕು ಸರ್ಕಾರ ಯಾವುದೇ ನೆರವು ನೀಡುವುದಿಲ್ಲ ಎಂದು ಸುತ್ತೋಲೆ ಹೊರಡಿಸಿರುವುದನ್ನು ರೈತ ವಿರೋಧಿ ಸರ್ಕಾರ ಎಂದು ಸಾಭೀತಾಗಿದೆ ಎಂದು ಲೇವಡಿ ಮಾಡಿದರು. ರೈತ ಕೃಷಿ ಪಂಪ್ ಸೆಟ್‌ಗಳಿಗೆ ಯಾವುದೇ ಅಡೆತಡೆ ಇಲ್ಲದೆ 3 ಫೇಸ್ ಆಧಾರದಲ್ಲಿ ಗುಣಮಟ್ಟದ ವಿದ್ಯುತ್‌ನ್ನು ಸರಬರಾಜು ಮಾಡುವಂತೆ ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ಮಾಜಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಮಾತನಾಡಿ, ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಎಲ್ಲಾ ರೈತರ ಪಂಪ್ ಸೆಟ್‌ಗಳು ಸುಟ್ಟು ಹಾಳಾಗುತ್ತಿವೆ. ಇದೊಂದು ರೈತ ವಿರೋಧಿ ಸರ್ಕಾರ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸೋಲಿಸಲು ಎಲ್ಲಾ ರೈತರು ಒಟ್ಟಾಗಿ ನಿರ್ಧಾರ ಕೈಗೊಳ್ಳಬೇಕೆಂದು ಕರೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಚಂದ್ರಶೇಖರ್, ಲೋಕೇಶ್, ಮಲ್ಲುಂಡಪ್ಪ ಹಾಗೂ ರೈತರು ಪಾಲ್ಗೊಂಡಿದ್ದರು. ಬಳಿಕ ಮೆಸ್ಕಾಂನ ಮುಖ್ಯ ಎಂಜಿನಿಯರ್‌ಗೆ ಮನವಿಯನ್ನು ಸಲ್ಲಿಸಲಾಯಿತು. 19 ಕೆಸಿಕೆಎಂ 1 ಲೋಡ್ ಶೆಡ್ಡಿಂಗ್ ವಿರೋಧಿಸಿ ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.