ಸಾರಾಂಶ
ರಾಣಿಬೆನ್ನೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೆ.ಎಸ್. ಪುಟ್ಟಣಯ್ಯ ಬಣ) ಕಾರ್ಯಕರ್ತರು ಸೋಮವಾರ ತಾಲೂಕಿನ ನಿಟ್ಟೂರ ಗ್ರಾಮದ ಕ್ರಾಸ್ ಬಳಿ ಹಲಗೇರಿ-ತುಮ್ಮಿನಕಟ್ಟಿ ರಸ್ತೆ ಮಾಡಿ ಪ್ರತಿಭಟನೆ ನಡೆಸಿದರು. ಗದಗ ಹೊನ್ನಾಳಿ ರಾಜ್ಯ ಹೆದ್ದಾರಿ ಪಕ್ಕದ ರಸ್ತೆಗೆ ಹೊಂದಿಕೊಂಡ ರೈತರ ಹೊಲಕ್ಕೆ ಹೋಗಲು ಸರಿಯಾದ ರೀತಿಯಲ್ಲಿ ರಸ್ತೆ ಮಾಡದೆ ಇರುವುದರಿಂದ ರೈತರು ತಮ್ಮ ತಮ್ಮ ಹೊಲಗಳಲ್ಲಿ ಹೋಗಲು ಆಗುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ಕಾಲುವೆಗಳನ್ನು ಸಹ ನಿರ್ಮಿಸಿರುವುದಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಕಾಲುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಚಾನೆಲ್ ನೀರು ರೈತರ ಹೊಲಗಳಿಗೆ ಸರಿಯಾಗಿ ಹರಿಯುತ್ತಿಲ್ಲ. ಕುಪ್ಪೇಲೂರ ಗ್ರಾಮದ ಹತ್ತಿರದ ಹೆಸ್ಕಾಂ ಗ್ರೀಡ್‌ನಿಂದ ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ನಮ್ಮ ಗ್ರಾಮದ ಹತ್ತಿರ ಗ್ರೀಡ್ ನಿರ್ಮಾಣ ಮಾಡಬೇಕು. ಕೋವಿಡ್ ಸಮಯದಲ್ಲಿ ಬಂದ್ ಆಗಿರುವ ವಸತಿ ಬಸ್ ಪುನಃ ಪ್ರಾರಂಭಿಸಬೇಕು. ಗ್ರಾಮದಿಂದ ಅಂತರವಳ್ಳಿ, ಹಾರೋಗೊಪ್ಪ ಗ್ರಾಮಗಳಿಗೆ ಹೋಗುವ ರೈತರ ಹೊಲದ ರಸ್ತೆಗಳನ್ನು ಸರಿ ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ತಹಸೀಲ್ದಾರ್, ಲೋಕೋಪಯೋಗಿ, ಹೆಸ್ಕಾಂ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಜತೆ ಚರ್ಚೆ ನಡೆಸಿದರು. ಇದೇ ವಿಚಾರವಾಗಿ ಆ. 2ರಂದು ನಗರದ ತಹಸೀಲ್ದಾರ್ ಕಚೇರಿಯಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.