ನಿಡಗುಂದಿ ತಾಲೂಕಿನ ಆರೇಶಂಕರ ಕೆರೆಯಿಂದ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಇಟಗಿ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಅಖಂಡ ಕರ್ನಾಟಕ ರೈತಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿತು.

ಕನ್ನಡಪ್ರಭ ವಾರ್ತೆ ನಿಡಗುಂದಿ

ತಾಲೂಕಿನ ಆರೇಶಂಕರ ಗ್ರಾಮದ ಬಳಿಯ ಆರೇಶಂಕರ ಕೆರೆಯಿಂದ ಕಾಲುವೆ ಮೂಲಕ ನೀರು ಹರಿಸಿ ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಆರಂಭಗೊಂಡಿರುವ ಧರಣಿ ಸತ್ಯಾಗ್ರಹ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.

ಶನಿವಾರ ಆರೇಶಂಕರ ಕೆರೆಯ ತಟದಲ್ಲಿ ಆರಂಭಿಸಿದ್ದ ಧರಣಿಯನ್ನು ಕೆರೆಯ ದಂಡೆಯಲ್ಲಿ ಇಕ್ಕಟ್ಟಿನ ಸ್ಥಳವಿರುವುದರಿಂದ ಧರಣಿ ನಡೆಸಲು ತೊಂದರೆಯಾಗುತ್ತಿದ್ದ ಹಿನ್ನೆಲೆ ಇಟಗಿ ಗ್ರಾಮದ ಬಸ್ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಿ ಮುಂದುವರಿಸಲಾಯಿತು.

ಎರಡನೇ ದಿನದ ಧರಣಿಯಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಉಮೇಶ ವಾಲಿಕಾರ, ಆರೇಶಂಕರ ಕೆರೆಯಿಂದ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಮಳೆಯಾಗಿರುವುದರಿಂದ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಆಲಮಟ್ಟಿ ಜಲಾಶಯವೂ ಭರ್ತಿಯಾಗಿದೆ. ಆದರೂ ವಿಜಯಪುರ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ನೀರು ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸುಮಾರು 400 ಕಿ.ಮೀ. ವ್ಯಾಪ್ತಿಯ ಜಿಂದಾಲ್‌ಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೂ ಐದು ಟಿಎಂಸಿ ನೀರು ನೀಡಲಾಗುತ್ತಿದೆ. ಎಲ್ಲವನ್ನೂ ತ್ಯಾಗ ಮಾಡಿರುವ ವಿಜಯಪುರ ಜಿಲ್ಲೆಯ ರೈತರಿಗೆ ನೀರು ನೀಡುವ ವಿಚಾರದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ವಾಲಿಕಾರ ಅಸಮಾಧಾನ ವ್ಯಕ್ತಪಡಿಸಿದರು.

ಆರೇಶಂಕರ ಹಾಗೂ ಇಟಗಿ ಗ್ರಾಮದ ವ್ಯಾಪ್ತಿಯ ರೈತರ ಬೆಳೆಗಳಿಗೆ ತಕ್ಷಣ ನೀರಿನ ಅನುಕೂಲ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರ ಹಿತದೃಷ್ಟಿಯಿಂದ ಕೆರೆಯಿಂದ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಧರಣಿಯಲ್ಲಿ ಪರಶುರಾಮ ಬಂದಾಳ, ಕರಿಯಪ್ಪ ಕೇಸಪುರ, ಶಾಂತಪ್ಪ ಗಾಳಿ, ಮಾಳಪ್ಪ ಮಾದಿ, ಪ್ರಕಾಶ್ ನೌಗೇರ, ಹನುಮಂತ ಮಾದರ, ತಿಪ್ಪಣ್ಣ ಮಾದರ, ರೇವಣಪ್ಪ ಮಾಜೀ, ಸಿದ್ದಪ್ಪ ಮಾಜೀ, ಚಂದ್ರಪ್ಪ ಗಾಳಿ, ಕೂಡ್ಲಯ್ಯ ಮಠಪತಿ, ಶ್ರೀಧರ ಅಂಬಿಗೇರ, ಸಂಗಪ್ಪ ಎಲಿಗಾರ, ರೇವಣಪ್ಪ ಮೇಟಿ, ಮಲ್ಲಿಕಾರ್ಜುನ ಓಲೆಕಾರ, ಮಲ್ಲಪ್ಪ ಶಿರಬಡಗಿ, ನಿಂಗಪ್ಪ ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.