ಬಡತನ ಕನಸುಗಳಿಗೆ ಅಡ್ಡಿಯಾಗದು, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಇಂಡಿ ತಾಲೂಕಿನ ಮಿರಗಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಂಜಲಿ ರಮೇಶ ರಾವೂರ ಸಾಬೀತುಪಡಿಸಿದ್ದಾರೆ.

ಖಾಜು ಸಿಂಗ್ಯಾಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಬಡತನ ಕನಸುಗಳಿಗೆ ಅಡ್ಡಿಯಾಗದು, ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಇಂಡಿ ತಾಲೂಕಿನ ಮಿರಗಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಂಜಲಿ ರಮೇಶ ರಾವೂರ ಸಾಬೀತುಪಡಿಸಿದ್ದಾರೆ. ಆರ್ಥಿಕ ಮುಗ್ಗಟ್ಟು ಮತ್ತು ಬಾಲ್ಯದಲ್ಲೇ ತಂದೆ ಕಳೆದುಕೊಂಡ ನೋವಿನ ನಡುವೆಯೂ ಛಲಬಿಡದೆ ಪರಿಶ್ರಮದಿಂದ ಓದಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸರ್ಕಾರಿ ಎಂಬಿಬಿಎಸ್ ಸೀಟ್ ಪಡೆದುಕೊಳ್ಳುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

9ನೇ ತರಗತಿಯಲ್ಲಿರುವಾಗಲೇ ಅಂಜಲಿ ತಂದೆ ಕಳೆದುಕೊಂಡರೂ ಧೃತಿಗೆಡದೆ, ತಾಯಿ ಹಾಗೂ ಮಾವನ ಆಶ್ರಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆ ಪಾಸ್ ಮಾಡಿ ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಅಂಜಲಿಯವರ ತಾಯಿ ಗ್ರಾಮದ ಶ್ರೀ ಗುರುಬಸವ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿಯ ನಿಧನದ ನಂತರವೂ ಎದೆಗುಂದದೆ, ಮಗಳಿಗೆ ಉತ್ತಮ ಶಿಕ್ಷಣ ನೀಡಿದ್ದರಿಂದ ಮಗಳಿಗೆ ಸರ್ಕಾರಿ ಎಂಬಿಬಿಎಸ್ ಸೀಟ್ ಸಿಕ್ಕಿರುವುದಕ್ಕೆ ಬಹಳ ಸಂತಸಪಟ್ಟಿದ್ದಾರೆ. ಅಕ್ಕನ ​ಮಗಳ ಪ್ರತಿಭೆ ಗುರುತಿಸಿದ ತಾಯಿಯ ತಮ್ಮ, ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮಲ್ಲಿಕಾರ್ಜುನ ಗುರಣ್ಣ ರೇವೂರ ಅವರು ಅಂಜಲಿಯ ಓದಿಗೆ ದೊಡ್ಡ ಬೆನ್ನೆಲುಬಾಗಿ ನಿಂತರು. ಟ್ಯೂಷನ್ ಇಲ್ಲದೆ ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠ ಕರಗತ ಮಾಡಿಕೊಂಡು ಎಸ್ಸೆಸ್ಸೆಲ್ಸಿಯಲ್ಲಿ ಶೇ. 96ರಷ್ಟು ಅಂಕ ಗಳಿಸಿದ್ದ ಅಂಜಲಿಗೆ, ಬೆಂಗಳೂರಿನ ಪ್ರತಿಷ್ಠಿತ ಪರಿಶ್ರಮ ನೀಟ್ ಅಕಾಡೆಮಿ ಹಾಗೂ ನಂತರ ಡಾ.ಅಕಾಡೆಮಿಯಲ್ಲಿ ನೀಟ್ ಪರೀಕ್ಷೆಗೆ ತರಬೇತಿ ಕೊಡಿಸುವ ಮೂಲಕ ಅಂಜಲಿಯ ವೈದ್ಯಕೀಯ ಕನಸಿಗೆ ಜೀವ ತುಂಬಿದರು. ತಾಯಿ ಹಾಗೂ ಮಾವನ ಆಸೆಯಂತೆ ಅಂಜಲಿ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ.

ಅಂಜಲಿ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು, 1 ರಿಂದ 7ನೇ ತರಗತಿವರೆಗೆ ಮಿರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 8 ರಿಂದ 10ನೇ ತರಗತಿವರೆಗೆ ಅದೇ ಗ್ರಾಮದ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹಾಗೂ ತುಂಗಳ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಕುಟುಂಬದವರ ಅಚಲ ಬೆಂಬಲದಿಂದ ಅಂಜಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸರ್ಕಾರಿ ವೈದ್ಯಕೀಯ ಸೀಟ್ ಗಿಟ್ಟಿಸಿಕೊಂಡಿದ್ದು, ಇವರ ಈ ಯಶೋಗಾಥೆಯು ವೈದ್ಯರಾಗುವ ಕನಸು ಕಾಣುವ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.