ಮುದ್ದೇಬಿಹಾಳ ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಶನಿವಾರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ, ಜನಪದ ಚರಗ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಗ್ರಾಮೀಣ ಭಾಗದಲ್ಲಿ ಅಡಗಿರುವ ಜನಪದ ಬೇರಿನಿಂದಲೇ ಭಾರತ ದೇಶದ ಸಂಸ್ಕೃತಿ ಉಳಿದಿದೆ ಹೊರತು ಕೇವಲ ಅಕ್ಷರಸ್ಥರಿಂದಲ್ಲ. ನಮ್ಮ ನಾಡಹಬ್ಬ ದಸರಾ ಉತ್ಸವವನ್ನು ಜಗತ್ತೇ ತಿರುಗಿ ನೋಡುವಂತಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಶನಿವಾರ ತಾಲೂಕು ಕರ್ನಾಟಕ ಜಾನಪದ ಪರಿಷತ್ ಘಟಕದ ಅಧ್ಯಕ್ಷರು ಹಾಗೂ ಸದಸ್ಯರ ಪದಗ್ರಹಣ, ‘ಜನಪದ ಚರಗ’ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಜಾನಪದ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಬಸರಕೋಡದ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವೈ. ಬಿರಾದಾರ ಜೋಳದ ತೆನೆಗಳನ್ನು ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.

ಡಾ.ಪ್ರಕಾಶ ನರಗುಂದ ಸಂಪಾದಿಸಿರುವ ಜನಪದ ಚರಗ ಕೃತಿಯನ್ನು ಎಸ್.ಜಿ.ವಿ.ಸಿ. ವಿದ್ಯಾಪ್ರಸಾರಕ ವಿಶ್ವನಿಧಿ ಕಾರ್ಯದರ್ಶಿ ಅಶೋಕ ತಡಸದ ಲೋಕಾರ್ಪಣೆ ಮಾಡಿದರು.

ತಾಲೂಕಿನ ಗೋನಾಳ ಪಿ.ಎನ್. ಗ್ರಾಮದ ಜಾನಪದ ಕಲಾವಿದೆ ಸುಪ್ರೀತಾ ಗೋನಾಳ ಈಚೆಗೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಪೊಲೀಸರು ಭೇದಿಸಿದ ಕುರಿತು ಜಾನಪದ ಹಾಡಿನ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿ ಎಲ್ಲರ ಗಮನ ಸೆಳೆದರು.ಸುಪ್ರೀತಾ ಅವರ ಕಲೆ ಮೆಚ್ಚಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಅವರು ಕಲಾವಿದೆಯನ್ನು ಸನ್ಮಾನಿಸಿ ಧನಸಹಾಯ ನೀಡಿ ಗೌರವಿಸಿದರು.

ವಿವಿಧ ಗ್ರಾಮಗಳ ಜಾನಪದ ಕಲಾವಿದರಿಗೆ ಸನ್ಮಾನ:

ಕಳೆದ ಮೂರು ತಿಂಗಳಿಂದ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಲ್ಲಿನ ಜಾನಪದ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಕಜಾಪ ತಾಲೂಕಾಧ್ಯಕ್ಷ ಎ.ಆರ್. ಮುಲ್ಲಾ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹುಲ್ಲೂರ ಗ್ರಾಮದ ಭಜನಾ ಕಲಾವಿದ ಗುರುಪಾದಪ್ಪ ಚಲವಾದಿ, ಪೀರಾಪುರ ಗ್ರಾಮದ ಬಯಲಾಟ ಶಿಕ್ಷಕ ಬಿ.ಎಸ್. ಬಿರಾದಾರ, ಕಾಶಿನಕುಂಟಿ ಗ್ರಾಮದ ರಂಗಭೂಮಿ ಕಲಾವಿದ ಬಂದಗಿಸಾಬ ಬಿಲಕೇರಿ, ಮಡಿಕೇಶ್ವರ ಗ್ರಾಮದ ಭಜನಾ ಕಲಾವಿದ ಸುಭಾಸ ಚಲವಾದಿ, ಕೋಳೂರ ಗ್ರಾಮದ ಹಾರ್ಮೋನಿಯಂ ಕಲಾವಿದ ಶೇಖಪ್ಪ ಕತ್ತಿ, ಅಬ್ಬಿಹಾಳ ಗ್ರಾಮದ ಭಜನಾ ಕಲಾವಿದ ಸಿದ್ದಪ್ಪ ಅಂಕನಾಳ, ಹರೀಂದ್ರಾಳ ಗ್ರಾಮದ ಶಹನಾಯಿ ಕಲಾವಿದ ರಮೇಶ ಭಜಂತ್ರಿ, ದೇವರ ಹುಲಗಬಾಳ ಗ್ರಾಮದ ಸೋಬಾನೆ ಕಲಾವಿದೆ ಚನ್ನಮ್ಮ ಪಾಟೀಲ, ಅಮರಗೋಳ ಗ್ರಾಮದ ಭಜನಾ ಕಲಾವಿದ ಶಿವಪ್ಪ ಅಮರಗೋಳ, ಕುಂಟೋಜಿ ಗ್ರಾಮದ ಹಂತಿಪದ ಕಲಾವಿದ ಎಂ.ಪಿ. ವಾಳದವರ, ಗೋನಾಳ ಪಿ.ಎನ್. ಗ್ರಾಮದ ಭಜನಾ ಕಲಾವಿದೆ ಸುಪ್ರಿತಾ ಗೋನಾಳ ಹಾಗೂ ಬಿದರಕುಂದಿ ಗ್ರಾಮದ ಜಾನಪದ ಕಲಾವಿದ ಎಸ್.ಕೆ. ಘಾಟಿ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.ಉಪಸ್ಥಿತರಿದ್ದರು.ನಶೆ ಮುಕ್ತ ಪ್ರತಿಜ್ಞಾ ಅಭಿಯಾನಕ್ಕೆ ಚಾಲನೆ:

ಮುದ್ದೇಬಿಹಾಳ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಹಿಳಾ ಘಟಕದ ವತಿಯಿಂದ ದಾದಿ ಪ್ರಕಾಶಮಣಿ ಜೀ ಅವರ ಸ್ಮರಣೆಯಲ್ಲಿ ಹಮ್ಮಿಕೊಂಡಿರುವ ನಶೆ ಮುಕ್ತ ಭಾರತ ಅಭಿಯಾನ ಹಾಗೂ ಮಿಷನ್ ಸ್ಪಂದನದಡಿ 10 ಕೋಟಿ ನಶೆಮುಕ್ತ ಪ್ರತಿಜ್ಞೆ ಸ್ವೀಕರಿಸುವ ಮಹಾ ಅಭಿಯಾನಕ್ಕೆ ಕರ್ನಾಟಕ ಜಾನಪದ ಪರಿಷತ್ ವೇದಿಕೆ ಮೂಲಕ ಚಾಲನೆ ನೀಡಲಾಯಿತು. ಗಣ್ಯರು, ಕಲಾವಿದರು ಹಾಗೂ ಸಾರ್ವಜನಿಕರು ನಶೆಮುಕ್ತ ಸಮಾಜ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು. ಎಲ್.ಎನ್. ನಾಯ್ಕೋಡಿ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರೆಹಮಾನ ಬಿದರಕುಂದಿ, ಕಜಾಪ ಕಾರ್ಯಾಧ್ಯಕ್ಷ ಸಂಗಣ್ಣ ಕಂಚ್ಯಾಣಿ, ಎಲ್.ಎಂ. ಚಲವಾದಿ, ಎಂ.ಎನ್. ಮಾಗಿ, ಚೇತನ ಶಿವಶಿಂಪಿ, ಸರಸ್ವತಿ ಪೀರಾಪೂರ, ಹುಸೇನ ಮುಲ್ಲಾ, ಎಂ.ವಿ. ಬೀಳೇಭಾವಿ, ರಮೇಶ ಇಂಗಳಗಿ, ವಿಜಯ ಸೋನಾರ, ಮಹ್ಮದ್ ರಫೀಕ್ ಢವಳಗಿ, ರಫೀಕ್ ಶಿರೋಳ, ಬಸವರಾಜ ಹರವಾಳ, ಪರಶುರಾಮ ಚೌಡಕೇರ, ಎಸ್.ಆರ್. ಪಾಟೀಲ, ರೂಪರಾಣಿ ಪಟೇಗಾರ, ನರಸಮ್ಮ ಗುಬಚಿ ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ಜಾನಪದಾಸಕ್ತರು ಇದ್ದರು.