ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಾನುವಾರುಗಳಿಗೆ ಕುಡಿಯಲು ಹಾಗೂ ಒಣಗುತ್ತಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾನುವಾರ ತಾಲೂಕಿನ ಕುಂದೂರು ಹಾಗೂ ಸುತ್ತಮುತ್ತಲ ಭಾಗದ ರೈತರು ಕುಂದೂರು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಾನುವಾರುಗಳಿಗೆ ಕುಡಿಯಲು ಹಾಗೂ ಒಣಗುತ್ತಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿ ಭಾನುವಾರ ತಾಲೂಕಿನ ಕುಂದೂರು ಹಾಗೂ ಸುತ್ತಮುತ್ತಲ ಭಾಗದ ರೈತರು ಕುಂದೂರು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.ಬಂದ್‌ಗೆ ಬೆಂಬಲ ಸೂಚಿಸಿದ ಸ್ವಾಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಜಿ.ಬಿ. ವಿನಯಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆಯ ಆರಂಭದಲ್ಲಿಯೇ ರೈತರ ಬೇಡಿಕೆ ಮತ್ತು ಬಂದ್‌ಗೆ ಬೆಂಬಲ ಸೂಚಿಸಿ ಮಾತನಾಡಿದರು.
ಜಿ.ಬಿ. ವಿನಯಕುಮಾರ್ ಮಾತನಾಡಿ, ಇದು ಕೃತಕ ಕ್ಷಾಮ, ಇಲ್ಲಿ ನೀರಿಗೆ ಬರ ಇಲ್ಲ. ಆದರೂ ನೀರು ಲಭ್ಯವಿಲ್ಲ. ರೈತರು ಮಳೆ ಕೊರತೆಯಿಂದ ಭತ್ತ ಬೆಳೆಯಲು ಸಾಧ್ಯವಾಗಲಿಲ್ಲ. ಒಂದಿಷ್ಟು ಮೆಕ್ಕೆಜೋಳ ಬೆಳೆ ಬೆಳೆದಿದ್ದಾರೆ. 400 ರಿಂದ 500 ಎಕರೆಯಷ್ಟು ರೈತರು ಅಡಕೆ ತೋಟಗಳನ್ನು ಕಟ್ಟಿಕೊಂಡು, ಒಣಗುತ್ತಿರುವ ಮರಗಳನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಧುಮಿಕಿದ್ದಾರೆ. ರೈತರ ಕೂಗು ಅಧಿಕಾರಿಗಳ ಮತ್ತು ಸರ್ಕಾರದ ಕಿವಿ ಮುಟ್ಟಬೇಕು. ಈ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕು. ಆಗಲೇ ನಿಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂದರು.ತೇಜಸ್ವಿ ಪಟೇಲ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ರೈತರಿಗೆ ನೀಡು ಕೊಡುತ್ತಿಲ್ಲ. ವಿಳಂಬ ಏಕೆ ಎಂದು ಅರ್ಥವಾಗುತ್ತಿಲ್ಲ, ಸರ್ಕಾರ ತನ್ನ ನೂರು ದಿನದ ಸಾಧನೆಗೆ ಚಿತ್ರದುರ್ಗದ ಭಾಗಕ್ಕೆ ಕುಡಿಯಲು ನೀರು ಬಿಟ್ಟಿದ್ದಾರೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಹತ್ತಾರು ವರ್ಷಗಳ ಕಾಲ ಹರಿಸಿದ ಶ್ರಮಕ್ಕೆ ನಮಗೆ ನೀರು ಬೇಕು. ಸರ್ಕಾರದ್ದು ಸಾಧನೆಯಾದರೆ ನಮ್ಮದು ಶ್ರಮ, ರೈತರ ತೋಟಗಳು ಎಷ್ಟು ಒಣಗುತ್ತೋ ಅಷ್ಟು ಸಿಟ್ಟು ಜಾಸ್ತಿಯಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಸರ್ಕಾರ ಜನರನ್ನು ಕಂಟ್ರೋಲ್ ಮಾಡೋದಕ್ಕೆ ಫೋರ್ಸ್ ತರಬಾರದು, ನೀರು ತರಬೇಕು ಎಂದರು.
ಭದ್ರಾ ಜಲಾಶಯದಲ್ಲಿ ಕಳೆದ ಬಾರಿ 165 ಅಡಿ ನೀರು ಇತ್ತು. ಆದರೂ, ಎರಡು ಬೆಳೆಗೆ ನೀರು ಕೊಡಲಾಗಿತ್ತು. ಈಗ 178 ಅಡಿ ನೀರಿದ್ದರೂ ನೀರು ಕೊಡಲು ಆಗುತ್ತಿಲ್ಲ ಏಕೆ ಎಂದು ನೆಲಹೊನ್ನೆ ಮೋಹನ್ ಪ್ರಶ್ನಿಸಿದರು. ಶಾಸಕ ಶಾಂತನಗೌಡ್ರು ಸರ್ಕಾರದ ಪರವಾಗಿ ಇದ್ದವರು ಅವರೇ ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರು ಏನು ಹೇಳುತ್ತಾರೋ ಹೇಳಲಿ ನೋಡೋಣ ಎಂದರು.ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ನಾನೂ ಒಬ್ಬ ರೈತ, ನನಗೆ ಅಧಿಕಾರ ಮುಖ್ಯವಲ್ಲ, ನಮ್ಮ ತಾಲೂಕಿನ ರೈತರ ಪರ ನಾನೂ ಇರುತ್ತೇನೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆ ಸಮಂಜಸವಾಗಿದೆ. ಈಗಾಗಲೇ ಸಚಿವರೊಂದಿಗೆ ಮಾತನಾಡಿದ್ದೇನೆ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು, ನಮ್ಮ ಶಾಸಕರು ಮತ್ತು ಅಧಿಕಾರಿ ವರ್ಗ ಸಭೆ ಸೇರಿ ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಸಚಿವರಿಗೆ ಮನವರಿಕೆ ಮಾಡಿಕೊಡುತ್ತೇವೆ. ತಿಂಗಳಿಗೆ 15 ದಿನಗಳವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, 150 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭೀಕರ ಬರಗಾಲ ಬಂದಿದೆ. ಸರ್ಕಾರ ಪ್ರತಿಯೊಂದು ಜಾತ್ರೆಗೂ, ಬೆಳೆಗಳಿಗೂ, ಕುಡಿಯುವುದಕ್ಕೂ ನೀರು ಕೊಡಲೇಬೇಕು, ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರವಿದೆ. ಈಗ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅಷ್ಟೇ ಅಲ್ಲ, ಬೇಸಿಗೆ ಬೆಳೆಗೂ ನೀರು ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ಈ ನಡುವೆ ಎಚ್.ಬಿ. ಮಂಜಪ್ಪ ಅವರಿಗೆ ಫೋನ್ ಮಾಡಿದ ಸಚಿವರು, ಇನ್ನೆರಡು ದಿನಗಳಲ್ಲಿ ಭದ್ರಾ ಜಲಾಶಯದಿಂದ ನೀರು ಕೊಡುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳೊಂದಿಗೆ ಮಾತನಾಡಿದ್ದೇನೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದನ್ನು ಸ್ಪೀಕರ್ ಇಟ್ಟು ಸಭೆಯಲ್ಲಿದ್ದ ರೈತರಿಗೆ ಕೇಳಿಸಿದರು. ಮಾತು ಮುಂದುವರಿಸಿದ ಶಾಸಕರು, ಈಗ ಮಂತ್ರಿಗಳು ಹೇಳಿದ್ದನ್ನು ನಾನು ಫಾಲೋ ಮಾಡುತ್ತೇನೆ. ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಎರಡು ದಿನ ನೀರಿಗಾಗಿ ಕಾಯುತ್ತೇವೆ, ನೀರು ಕೊಡದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದ ರೈತರು ಪ್ರತಿಭಟನೆ ಹಿಂಪಡೆದುಕೊಂಡರು. ಪ್ರತಿಭಟನೆಯಲ್ಲಿ ನೆಲಹೊನ್ನೆ, ಕುಂಬಳೂರು, ಕುಂದೂರು, ಎರೇಹಳ್ಳಿ, ಚಿಕ್ಕಹಾಲಿವಾಣ, ಬನ್ನಿಕೋಡು, ಯರೇಚಿಕ್ಕನಹಳ್ಳಿ, ತಿಮ್ಮೇನಹಳ್ಳಿ, ಮುಕ್ತೇನಹಳ್ಳಿ, ಯಕ್ಕನಹಳ್ಳಿ ಭಾಗದ ರೈತರು ಭಾಗವಹಿಸಿದ್ದರು.ಪ್ರತಿಭಟನೆಯಲ್ಲಿ ನೆಲಹೊನ್ನೆ ದೇವರಾಜ್, ಮೋಹನ್, ಕುಂಬಳೂರು ವಾಗೀಶ್, ಯಕ್ಕನಹಳ್ಳಿ ಜಗದೀಶ್, ಎಂ.ಜಿ.ಆರ್. ಮಂಜುನಾಥ್, ದಯಾನಂದ್, ತಿಮ್ಮೇನಹಳ್ಳಿ ಹನುಮಂತಪ್ಪ, ರಾಜಶೇಖರ್, ರವಿಕುಮಾರ್, ಎಚ್.ಎ. ಗದ್ದಿಗೇಶ್ ಸೇರಿದಂತೆ ಸಾವಿರಾರು ಜನ ರೈತರು ಭಾಗಿಯಾಗಿದ್ದರು.
- - --13ಎಚ್.ಎಲ್.ಐ1: