ಸಾಲ ವಸೂಲಾತಿ ನ್ಯಾಯಾಧೀಕರಣದಿಂದ ತಲುಪಿದ ರೈತರಿಗೆ ನೋಟಿಸ್ ಬಂದಿರುವ ಕಾರಣ ಸಮೀಪದ ನಂದಿತಾವರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಮುಂಭಾಗ ಸೋಮವಾರ ರೈತ ಮುಖಂಡರಾದ ತೇಜಸ್ವಿ ಪಟೇಲ್, ಹಾಳೂರು ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

- ಸಾಲ ವಸೂಲಾತಿ ಸಂಬಂಧ ರೈತರಿಗೆ ನೋಟಿಸ್‌ । ತೇಜಸ್ವಿ ಪಟೇಲ್‌, ಹಾಳೂರು ನಾಗರಾಜ್‌ ಆಲ್ರೋಶ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಸಾಲ ವಸೂಲಾತಿ ನ್ಯಾಯಾಧೀಕರಣದಿಂದ ತಲುಪಿದ ರೈತರಿಗೆ ನೋಟಿಸ್ ಬಂದಿರುವ ಕಾರಣ ಸಮೀಪದ ನಂದಿತಾವರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಮುಂಭಾಗ ಸೋಮವಾರ ರೈತ ಮುಖಂಡರಾದ ತೇಜಸ್ವಿ ಪಟೇಲ್, ಹಾಳೂರು ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಹಾಳೂರು ನಾಗರಾಜ್ ಮಾತನಾಡಿ, ಬ್ಯಾಂಕ್ ಅಧಿಕಾರಿಗಳು ರೈತರ ಜತೆ ತೋರುವ ವರ್ತನೆ ಸರಿಯಿಲ್ಲ. ಸರ್ಕಾರ ಕನ್ನಡದಲ್ಲಿ ಸುತ್ತೋಲೆ ಹೊರಡಿಸಲು ಆದೇಶ ಮಾಡಿದೆ. ನ್ಯಾಯಾಧೀಕರಣದಿಂದ ಆಂಗ್ಲ ಭಾಷೆಯಲ್ಲಿ ಪತ್ರ ಬಂದಿದೆ, ಭಾರತೀಯ ಬ್ಯಾಂಕ್ ಮಾರ್ಗಸೂಚಿಯನ್ನು ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.

ರೈತ ಬೀರಪ್ಪ, ನಾರಾಯಣಪ್ಪ ಎಂಬುವರ ೨೨ ಎಕರೆ ಜಮೀನು ಇದ್ದು, ಬೆಳೆ ಸಾಲ ಮತ್ತು ಅವಧಿ ಸಾಲ ಎರಡೂ ಸೇರಿ ₹೮ ಲಕ್ಷ ಸಾಲ ಪಡೆದಿದ್ದಾರೆ. ಒಟ್ಟು ₹೪೧ ಲಕ್ಷ ಮೊತ್ತ ಬಾಕಿ ಎಂದು ನೋಟಿಸ್ ನೀಡಿದ್ದೀರಿ. ಅಲ್ಲದೇ ಸಾಲ ವಸೂಲಾತಿ ನಾಯಾಧೀಕರಣದಿಂದ ಇದೇ ಏ.೨೭ಕ್ಕೆ ಹರಾಜು ಇರುವ ನೋಟಿಸ್ ಸಹ ನೀಡಿದ್ದು ಯಾವ ನ್ಯಾಯ? ಕೇಂದ್ರ ಬ್ಯಾಂಕ್ ಮಾರ್ಗಸೂಚಿ ಕೊಡಿ. ಅಲ್ಲಿಯವರೆಗೂ ಹರಾಜು ಪ್ರಕ್ರಿಯೆ ತಡೆಹಿಡಿಯಿರಿ ಎಂದು ಒತ್ತಾಯಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ರೈತರು ಮತ್ತು ಬ್ಯಾಂಕ್‌ಗಳು ಉಳಿಯಬೇಕು. ಕೊನೆ ಭಾಗದ ರೈತರ ಜಮೀನಿಗೆ ನೀರಿಲ್ಲ, ಬೆಳೆಯೂ ಇಲ್ಲ. ಕಾನೂನು ಪ್ರಕಾರ ರೈತರಿಗೆ ಅನುಕೂಲವಾಗಲು ಒನ್ ಟೈಂ ಸೆಟ್ಲಮೆಂಟ್ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಆಲಿಸಿದ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ವಿ. ಕಾಮತ್ ಮಾತನಾಡಿ, ನೋಟಿಸ್ ನೀಡಿರುವ ರೈತರ ಹೆಸರಲ್ಲಿ ಬೆಳೆಸಾಲ ಮತ್ತು ಅವಧಿ ಸಾಲ ಇದೆ. ರೈತರ ಎರಡೂವರೆ ಲಕ್ಷ ರು. ಸಾಲ ನೀಡಲು ಯಾವುದೇ ಭದ್ರತೆ ತಗೊಳ್ಳಲ್ಲ. ಕನ್ನಡದಲ್ಲಿ ನ್ಯಾಯಾಧೀಕರಣಕ್ಕೆ ವರದಿ ನೀಡಿದ್ದು, ಆ ಕಚೇರಿಯಿಂದ ರೈತರಿಗೆ ನೋಟಿಸ್ ನೀಡಲಾಗಿದೆ. ರೈತ ಮುಖಂಡರು ಬ್ಯಾಂಕ್‌ಗೆ ಆಗಮಿಸಿದಲ್ಲಿ ಜನರಲ್ ಮ್ಯಾನೇಜರ್ ಜತೆ ಚರ್ಚಿಸಿ ಒನ್ ಟೈಮ್ ಸೆಟಲ್‌ಮೆಂಟ್ ಮಾಡೋಣ ಎಂದು ವಿವರಿಸಿದರು.

ತಂದೆಯವರು ಜಾಮೀನಿಗೆ ಸಹಿ ಮಾಡಿದಲ್ಲಿ ಅವರ ಮಗನಿಂದ ಬ್ಯಾಂಕ್‌ಗಳು ಹಣ ಜಮಾ ಮಾಡಿಸಿಕೊಳ್ಳುತ್ತಾರೆ ಹಾಗೂ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ವಿಳಂಬ ಮಾಡುತ್ತಾರೆ ಎಂದು ರೈತರಾದ ರಾಘವೇಂದ್ರ, ಶಿವಣ್ಣ, ಭಾನುವಳ್ಳಿ ಪರಮೇಶ್ವರಪ್ಪ ಆರೋಪಿಸಿದರು.

ಬ್ಯಾಂಕ್ ಶಾಖಾ ವ್ಯವಸ್ಥಾಪಕ ಮಹಂತೇಶ್, ಹಿರಿಯ ವ್ಯವಸ್ಥಾಪಕ ಶಿವಕುಮಾರ್, ವಸೂಲಿ ಅಧಿಕಾರಿ ನಾಶಿ ಹಾಜರಿದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಡಿ.ಬಿ. ನಂದೀಶ್, ಶಂಭಣ್ಣ, ಪ್ರಕಾಶ ರೆಡ್ಡಿ, ಈರಪ್ಪ, ಚಂದ್ರು, ವಿಜಯ್, ಮಾರುತಿ, ರುದ್ರಮುನಿ, ಜಿಗಳಿ ಮಹಂತೇಶ್, ನಾಗಪ್ಪ, ಗದಿಗೆಪ್ಪ, ರಂಗನಗೌಡ, ಪರಮೇಶ್ವರಪ್ಪ, ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

- - -

-ಚಿತ್ರ-೧: ರೈತರ ಪ್ರತಿಭಟನೆ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚರ್ಚೆ ನಡೆಸಿದರು.