ಸಾರಾಂಶ
-ರೈತರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಆಗ್ರಹ
-ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ರೈತರ ಆಕ್ರೋಶಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ರೈತರು, ರಾಜ್ಯದ ಜನತೆ ಬಹಳ ನಿರೀಕ್ಷೆಯೊಂದಿಗೆ ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ವಿಧಾನಸೌಧದಲ್ಲಿ ಪಕ್ಷದ ಆಡಳಿತ ಬದಲಾಗಿದೆ. ಅಧಿಕಾರ ನಡೆಸುತ್ತಿರುವವರ ಮುಖಗಳು ಬದಲಾಗಿವೆ. ಆದರೆ ಯಥಾಸ್ಥಿತಿ ಆಡಳಿತ ಮುಂದುವರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರ ಬಂದು ಒಂದು ವರ್ಷದ ಅವಧಿಯಲ್ಲೇ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ 187 ಕೋಟಿ ಹಣ ದುರುಪಯೋಗದ ಹಗರಣದ ಆರೋಪಕ್ಕೆ ಒಳಗಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಲಂಗು ಲಗಾಮಿಲ್ಲದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭೂ ಮಾಫಿಯಗಳ ಅಕ್ರಮಗಳು ನಿರಂತರವಾಗಿ ಸಾಗುತ್ತಲೆ ಇವೆ. ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತಲೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ರೈತರು ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಸರ್ಕಾರ ವೆಚ್ಚವನ್ನು ಭರಿಸಬೇಕು. ಕರ ನಿರಾಕರಣೆ ಚಳವಳಿಯಲ್ಲಿ ರೈತ ಕುಟುಂಬದವರು ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು ಎಂದು ತಿಳಿಸಿದರು.
ಕಳೆದ ವರ್ಷ ಏಪ್ರಿಲ್ ನಿಂದ ಇದುವರೆಗೆ 1182 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಈ ಆತ್ಮಹತ್ಯೆಗಳಲ್ಲಿ ಯುವಕರು ಹೆಚ್ಚು ಒಳಗಾಗಿರುವುದು ಆತಂಕಕ್ಕೀಡು ಮಾಡಿದೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ರೈತಪರ ಕಾರ್ಯಕ್ರಮಗಳನ್ನು ರೂಪಿಸಿ, ರೈತ ಸಮುದಾಯಕ್ಕೆ ಆತ್ಮಸ್ಥೆರ್ಯ ತುಂಬಬೇಕು. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರವೇ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ನಿಗಧಿ ಮಾಡಿ ಖರೀದಿಸಬೇಕು. ಹಿಂದೆಂದೂ ಕಂಡರಿಯದ ಬರಗಾಲವನ್ನು ರಾಜ್ಯ ಎದುರಿಸಿದೆ. ಇಂತಹ ಸಂದರ್ಭದಲ್ಲೂ ಬ್ಯಾಂಕುಗಳು ಸಾಲ ಬಾಕಿ ವಸೂಲಿಗಾಗಿ ರೈತರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಪ್ಪಿಸಿ ರೈತರ ರಕ್ಷಣೆಗೆ ಬರಬೇಕು ಎಂದು ಆಗ್ರಹಿಸಿದರು.
ರೈತರ ಎಲ್ಲಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಬೆಳೆಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿಯನ್ನು ರೈತರ ಖಾತೆ ಕೂಡಲೇ ಹಾಕಬೇಕು. ಫಸಲು ಪಹಣಿ ದುರಸ್ತಿ, ಪಕ್ಕಾ ಪೋಡು, ಹದ್ದುಬಸ್ತು ಶುಲ್ಕವನ್ನು ಕೂಡಲೆ ಇಳಿಸಬೇಕು ಎಂದರು.ರೈತರಿಂದ ಖರೀದಿ ಕೇಂದ್ರದ ಮೂಲಕ ಜೋಳ, ರಾಗಿ ಇತ್ಯಾದಿ ಉತ್ಪನ್ನಗಳನ್ನು ಖರೀದಿ ಮಾಡಿದ್ದು, ಇನ್ನೂ ರೈತರಿಗೆ ಹಣ ಪಾವತಿಯಾಗಿಲ್ಲ. ಕೂಡಲೇ ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಬರ ಪರಿಹಾರದ ಹಣ, ವಿಮಾ ಪರಿಹಾರದ ಹಣವನ್ನೂ ಬ್ಯಾಂಕ್‌ನವರು ಸಾಲಕ್ಕಾಗಿ ಜಮಾ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶ ನೀಡಿ ಇದನ್ನು ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ತಪ್ಪಿಸಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗು ಪಟ್ಟಾ ನೀಡಬೇಕು. ಕಾಡು ಪ್ರಾಣಿಗಳಿಂದ ಹಾಳಾದ ಅಸ್ತಿ, ಪ್ರಾಣ ಹಾನಿ, ನಷ್ಟವಾದ ಬೆಳೆಗಳಿಗೆ ವೈಜ್ಞಾನಿಕ ನಷ್ಟ ಪರಿಹಾರವನ್ನು ತುಂಬಿಕೊಡಬೇಕು. ರೈತರ ಜಮೀನಿನಲ್ಲಿ ಬೆಳೆಯುವ ಸಾಗುವನಿ ಕಡಿತ ಮತ್ತು ಸಾಗಾಣಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಟನ್ ಒಂದಕ್ಕೆ 150 ರು. ಪಾವತಿಸಬೇಕೆಂದು ಹಿಂದಿನ ಸರ್ಕಾರ ತೀರ್ಮಾನಿಸಿದ್ದು, ಇದಕ್ಕಿರುವ ತಾಂತ್ರಿಕ ತೊಂದರೆಗಳನ್ನು ಕೂಡಲೆ ನಿವಾರಿಸಿ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಎಸ್ಎಪಿ ಘೋಷಿಸಬೇಕು. ಸರ್ಕಾರ ಮಾತಿನಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಂದಾಯಬೀಳು, ಕ್ರಯದಬೀಳು ರೇಸ್ಟೋರ್ ಗೆ ಅವಕಾಶ ಕಲ್ಪಿಸಬೇಕು. ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ಮಾಡಬಾರದು. ಜಲಾಶಯದ ಸುತ್ತಾಮುತ್ತಾ ಗಣಿಗಾರಿಕೆ ನಿಷೇಧಿಸಿ ಅಣೆಕಟ್ಟನ್ನು ರಕ್ಷಿಸಬೇಕು. ಮುಡಾ ಹಗರಣಕ್ಕೆ ಸೂಕ್ತ ಕ್ರಮವಹಿಸಿ ತಪ್ಪಿತಸ್ಥರು ಯಾರು ಭಾಗಿಯಾಗಿದ್ದರೂ ಅವರ ವಿರುದ್ಧ ನಿಷ್ಪಕ್ಷವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕಾವೇರಿ ಜಲಾಶಯದಲ್ಲಿ ನೀರಿನ ಶೇಖರಣೆ ಕಡಿಮೆ ಇರುವುದರಿಂದ ನೀರು ಹರಿಸಬಾರದು. ಮೈಸೂರು ತಾಲೂಕಿನ ಕೋಚನಹಳ್ಳಿ ರೈತರಿಗೆ ಮೋಸ ಮಾಡಿರುವ ಭೂಮಾಫಿಯ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಕೆ.ಮಲ್ಲಯ್ಯ, ಎಂ.ಪುಟ್ಟಸ್ವಾಮಿ, ಚೀಲೂರು ಮುನಿರಾಜು, ಲೋಕೇಶ್, ಕೆ.ಎನ್.ರಾಜು, ಬಸವರಾಜ್, ಬುಡೇನ್ ಸಾಬ್, ರತ್ನಮ್ಮ, ರಮ್ಯ, ಕೆ.ನಾಗರಾಜು, ಕೆ.ಎಲ್. ಚಂದ್ರಶೇಖರ್, ರಾಮೇಗೌಡ, ಕೋದಂಡರಾಮ, ತೇಜಸ್ವಿ, ಬೋರೇಗೌಡ, ಸಾವಿತ್ರಮ್ಮ, ವಸಂತಮ್ಮ, ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.