ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

| Published : May 05 2024, 02:05 AM IST

ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಘಟಪ್ರಭಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಯಾದವಾಡ ಸರ್ಕಲ್ ಬಳಿ ಶುಕ್ರವಾರ ರಾಜ್ಯ ಹೆದ್ದಾರಿ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ ಘಟಪ್ರಭಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಯಾದವಾಡ ಸರ್ಕಲ್ ಬಳಿ ಶುಕ್ರವಾರ ರಾಜ್ಯ ಹೆದ್ದಾರಿ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು.

ಹೋರಾಟದ ಪ್ರಮುಖ ಮಹೇಶಗೌಡ ಪಾಟೀಲ ಮಾತನಾಡಿ, ಘಟಪ್ರಭಾ ನದಿಯಲ್ಲಿ ವಾರದಿಂದಲೂ ನೀರು ಖಾಲಿಯಾಗಿದೆ, ಹಿಡಕಲ್ ಜಲಾಶಯದಿಂದ ಜಿಲ್ಲಾಡಳಿತ ನೀರು ಹರಿಸುವ ವ್ಯವಸ್ಥೆ ಮಾಡಬೇಕು, ನಮ್ಮ ಭಾಗಕ್ಕೆ ಬರುವ ನೀರಿನ ಪ್ರಮಾಣ 2 ಟಿಎಂಸಿ ನೀರು ಹರಿಸಬೇಕು. ಜನ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.

ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು ಸುಡುಬಿಸಿಲಿನಲ್ಲಿ ರಸ್ತೆಯೇ ಮೇಲೆ ಕುಳಿತು ತಾಲೂಕಾಡಳಿತ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಬೈಪಾಸ್‌ಗಳ ಮಾರ್ಗವಾಗಿ ಪೊಲೀಸರು ವಾಹನದ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಪ್ರಮುಖರಾದ ಬಸವಂತಪ್ಪ ಕಾಂಬಳೆ, ನಾಗೇಶ ಸೋರಗಾಂವಿ, ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಬಿಸಿಎಂ ನಿಗಮದ ಮಾಜಿ ನಿರ್ದೇಶಕ ಸದಾಶಿವ ಇಟಕನ್ನವರ, ಸುಭಾಷ ಶಿರಬೂರ, ಲಕ್ಷ್ಮಣ ಚಿನ್ನಣ್ಣವರ, ದುಂಡಪ್ಪ ನೀಲಿ, ಎಸ್.ಎಸ್.ರಾಮತೀರ್ಥ, ಸದಾಶಿವ ತೇಲಿ, ರುದ್ರಪ್ಪ ಅಡವಿ, ರಾಜು ಯಡಹಳ್ಳಿ ಇತರರು ಇದ್ದರು.

ಘಟಪ್ರಭಾ ನದಿಗೆ ಶೀಘ್ರವೇ ನೀರು ಹರಿಸಲಾಗುವುದು, ನದಿ ತೀರದಲ್ಲಿ ರೈತರಿಗೆ ಆತಂಕ ಬೇಡ, ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಮನವರಿಕೆ ಮಾಡಿ ಪ್ರಸ್ತಾವನೆ ಕಳಿಸಿದ್ದಾರೆ, ಬೇಸಿಗೆಯ ದಿನಗಳಲ್ಲಿ ಜಿಲ್ಲೆಗೆ ಬಿಡಬೇಕಾಗಿದ್ದ 2 ಟಿಎಂಸಿ ನೀರು ಹರಿಸಲು ಮನವಿ ಮಾಡಲಾಗಿದೆ.

- ಆರ್‌.ಬಿ. ತಿಮ್ಮಾಪುರ ಸಚಿವ