ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು

| Published : Aug 08 2024, 01:33 AM IST

ಸಾರಾಂಶ

ಮಳೆಯ ಅಭಾವದಿಂದ ಒಣಗಿ ಹೋಗುತ್ತಿರುವ ಬೆಳೆಯನ್ನು ಕಾಪಾಡಿಕೊಳ್ಳಲು ರೈತರು ಈಗ ಟ್ಯಾಂಕರ್ ನೀರು ಉಣಿಸುತ್ತಿದ್ದಾರೆ.

ಟ್ಯಾಂಕರ್ ಮೂಲಕ ನೀರು ಹರಿಸುತ್ತಿರುವ ಬೆಟಗೇರಿ ರೈತ

ಆರ್ಥಿಕವಾಗಿ ಹೊರೆಯಾಗುತ್ತದೆಯಾದರೂ ಅನಿವಾರ್ಯ ಎನ್ನುತ್ತಾರೆ ರೈತರು

ಜಿಲ್ಲಾದ್ಯಂತ ಮಳೆ ಅಭಾವ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಳೆಯ ಅಭಾವದಿಂದ ಒಣಗಿ ಹೋಗುತ್ತಿರುವ ಬೆಳೆಯನ್ನು ಕಾಪಾಡಿಕೊಳ್ಳಲು ರೈತರು ಈಗ ಟ್ಯಾಂಕರ್ ನೀರು ಉಣಿಸುತ್ತಿದ್ದಾರೆ.

ಜನರು ಕುಡಿಯುವ ನೀರಿಗೆ ಟ್ಯಾಂಕರ್‌ ಮೊರೆ ಹೋಗುವುದು ಸಾಮಾನ್ಯ, ಆದರೆ, ಇಲ್ಲಿಯ ರೈತರು ತಮ್ಮ ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಹಾಕುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆಯಾಗುತ್ತಿದ್ದರೂ ಬೆಳೆ ಉಳಿಸಿಕೊಳ್ಳಲು ಅನಿವಾರ್ಯ ಎನ್ನುತ್ತಿದ್ದಾರೆ ರೈತರು.

ಬೆಟಗೇರಿ ಗ್ರಾಮದ ರೈತ ಮುತ್ತಣ್ಣ ಕೋಮಲಾಪುರ ತಮ್ಮ ಐದು ಎಕರೆ ಹೊಲದಲ್ಲಿ ಮೆಕ್ಕಜೋಳ ಬೆಳೆದಿದ್ದಾರೆ. ಕಳೆದೊಂದು ತಿಂಗಳಿಂದ ಮಳೆ ಇಲ್ಲದಿರುವುದರಿಂದ ಮೆಕ್ಕೆಜೋಳ ಒಣಗಲಾರಂಭಿಸಿದೆ. ಅದರಲ್ಲೂ ತೆನೆಕಟ್ಟುವ ಹಂತದಲ್ಲಿರುವ ಮೆಕ್ಕೆಜೋಳಕ್ಕೆ ಹಸಿಯ(ತೇವಾಂಶದ) ಕೊರತೆಯಾದರೆ ಬೆಳೆಯೇ ಕೆಟ್ಟು ಹೋಗುತ್ತದೆ. ಹೀಗಾಗಿ, ವಿಧಿಯಿಲ್ಲದೇ ಟ್ಯಾಂಕರ್ ನೀರು ಹಾಕಿ, ಮೆಕ್ಕೆಜೋಳ ಕಾಪಾಡಿಕೊಳ್ಳುತ್ತಿದ್ದಾರೆ.

ಹತ್ತಾರು ಟ್ರ್ಯಾಕ್ಟರ್‌ಗಳ ಮೂಲಕ ಟ್ಯಾಂಕರ್ ನೀರು ತಂದು ಹಾಕುತ್ತಿದ್ದಾರೆ. ಇದಕ್ಕಾಗಿ ಹತ್ತಾರು ಸಾವಿರ ರುಪಾಯಿ ವೆಚ್ಚ ಮಾಡುತ್ತಿದ್ದಾರೆ.

ಐದು ಎಕರೆಗೆ ಬರೋಬ್ಬರಿ 300 ಟ್ಯಾಂಕರ್ ನೀರು ಹಾಕಿದ್ದಾರೆ. ಹಳ್ಳ-ಕೊಳ್ಳಗಳಲ್ಲಿ ಇರುವ ನೀರನ್ನು ತುಂಬಿಕೊಂಡು ಬಂದು, ಬೆಳೆಗೆ ಹಾಕುತ್ತಿದ್ದಾರೆ.

ತಮ್ಮೂರಿನಲ್ಲಿಯೇ ಇರುವ ಇತರರ ಟ್ರ್ಯಾಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಯಾವುದೇ ಬಾಡಿಗೆಯನ್ನು ನೀಡುತ್ತಿಲ್ಲವಂತೆ. ಕೇವಲ ಇಂಧನ ವೆಚ್ಚ ಮಾತ್ರ ಭರಿಸುತ್ತಿದ್ದಾರೆ. ಆದರೂ ಐದು ಎಕರೆಗೆ ಬರೋಬ್ಬರಿ ₹ 15 ಸಾವಿರ ರುಪಾಯಿ ವೆಚ್ಚವಾಗಿದೆ ಎನ್ನುತ್ತಾರೆ ಮುತ್ತಣ್ಣ ಕೋಮಲಾಪುರ.

ಇದು, ಇವರೊಬ್ಬರ ಕತೆಯಲ್ಲ. ಹೀಗೆ ಕೊಪ್ಪಳ, ಯಲಬುರ್ಗಾ ತಾಲೂಕಿನ ವಿವಿಧೆಡೆ ರೈತರು ತಮ್ಮ ಬೆಳೆಯನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ನೀರು ಹಾಕುತ್ತಿದ್ದಾರೆ.

ಬೆಳೆ ಅತ್ಯುತ್ತಮವಾಗಿ ಬಂದಿದ್ದು, ಇದೊಂದು ಬಾರಿ ನೀರನ್ನು ಟ್ಯಾಂಕರ್ ಮೂಲಕ ಹಾಯಿಸಿದರೆ ಮುಂದೆ ಮಳೆಯಾದರೆ ಉತ್ತಮ ಫಸಲು ಬರುತ್ತದೆ. ಹಾಗೊಂದು ವೇಳೆ ಮುಂದೆಯೂ ಮಳೆ ಬಾರದಿದ್ದರೆ ಮತ್ತೊಮ್ಮೆ ನೀರನ್ನು ಟ್ಯಾಂಕರ್ ಮೂಲಕವೇ ಹಾಯಿಸುತ್ತೇವೆ ಎನ್ನುತ್ತಾರೆ ರೈತರು.ಮಳೆಯ ಅಭಾವ:

ಜಿಲ್ಲೆಯಲ್ಲಿ ಮಳೆಯ ಅಭಾವ ಎದುರಾಗಿದೆ. ಶೇ. 28ರಷ್ಟು ಮಳೆಯ ಅಭಾವವಾಗಿದ್ದು, ತಾಲೂಕುವಾರು ನೋಡಿದಾಗ ಕೊಪ್ಪಳ, ಗಂಗಾವತಿ ಹಾಗೂ ಕುಕನೂರು ತಾಲೂಕು ವ್ಯಾಪ್ತಿಯಲ್ಲಿ ಶೇ. 40 ರಿಂದ 50ರಷ್ಟು ಮಳೆಯ ಅಭಾವ ಇದೆ. ಹೀಗಾಗಿ, ರೈತರು ಅನಿವಾರ್ಯವಾಗಿ ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.ಮಳೆಯ ಅಭಾವ ಎದುರಾಗಿರುವುದು ನಿಜ. ಇದರಿಂದ ಬೆಳೆಗಳು ಬಾಡಿದ್ದು, ತುರ್ತಾಗಿ ಮಳೆಯ ಅಗತ್ಯವಿದೆ. ವಾರದೊಳಗಾಗಿ ಮಳೆಯಾಗದಿದ್ದರೆ ಬೆಳೆ ಒಣಗಲಾರಂಭಿಸುತ್ತವೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ.

ಮಳೆಯ ಅಭಾವದಿಂದಾಗಿ ರೈತರು ತಮ್ಮ ಬೆಳೆ ಕಾಪಾಡಿಕೊಳ್ಳಲು ಟ್ಯಾಂಕರ್ ಬಳಕೆ ಮಾಡುತ್ತಿದ್ದಾರೆ. ಇದು ರೈತರಿಗೆ ಆರ್ಥಿಕ ಹೊರೆಯಾಗುತ್ತದೆಯಾದರೂ ಬಂದಿರುವ ಬೆಳೆಯನ್ನು ಕಾಪಾಡಿಕೊಳ್ಳಲು ಅನಿವಾರ್ಯ ಎನ್ನುತ್ತಾರೆ ಬೆಟಗೇರಿ ರೈತ ಏಳುಕೋಟೇಶ.