ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಸಿಗುವುದಿಲ್ಲ ಎಂಬ ಆತಂಕದಿಂದ ರೈತರು ಮುಗಿಬಿದ್ದಿದ್ದಾರೆ.
ಹೂವಿನಹಡಗಲಿ: ತಾಲೂಕಿನಲ್ಲಿ ಎಲ್ಲ ಕಡೆಗೂ ರಸಗೊಬ್ಬರ ಬೇಡಿಕೆ ನಿರಂತರ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ರಸಗೊಬ್ಬರ ತರಿಸಿ ರೈತರಿಗೆ ವಿತರಣೆ ಮಾಡುತ್ತಿವೆ. ಆದರೆ ರೈತರ ಗಲಾಟೆ, ಗೊಂದಲಗಳ ನಡುವೆ ಯೂರಿಯಾ ವಿತರಣೆ ಸ್ಥಗಿತ ಮಾಡಿರುವ ಘಟನೆ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದೆ.
ಹೊಳಗುಂದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 650 ಚೀಲ ಯೂರಿಯಾ ಬಂದಿದೆ. ರೈತರಿಗೆ ವಿತರಣೆ ಮಾಡುತ್ತಾರೆಂಬ ಸುದ್ದಿ ತಿಳಿಯುತ್ತಿದಂತೆಯೇ ಸೊಸೈಟಿ ಮುಂದೆ ರೈತರು ಜಮಾವಣೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಸಿಗುವುದಿಲ್ಲ ಎಂಬ ಆತಂಕದಿಂದ ರೈತರು ಮುಗಿಬಿದ್ದಿದ್ದಾರೆ.ಸರ್ವರ್ ಸಮಸ್ಯೆ?
ಯೂರಿಯಾ ಅತಿಯಾದ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬಂಜರು ಆಗುತ್ತದೆ. ಮುಂದಿನ ದಿನಗಳಲ್ಲಿ ಇದರ ಬಳಕೆ ತಗ್ಗಿಸಬೇಕು ಎಂದು ಸರ್ಕಾರ ರೈತರಿಗೆ ಸಲಹೆ ಮಾಡುತ್ತಿದೆ. ಜತೆಗೆ ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ ಮಾಡಿದೆ. ಆದರೆ ಈಗ ಯೂರಿಯಾ ಖರೀದಿಗೆ ರಾಜ್ಯ ಮಟ್ಟದಲ್ಲೇ ಸರ್ವರ್ ಸಮಸ್ಯೆ ಎದುರಾಗಿದೆ. ರೈತರಿಗೆ ಯೂರಿಯಾ ಸಕಾಲದಲ್ಲಿ ಸಿಗುತ್ತಿಲ್ಲ. ಹೊಳಗುಂದಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ಇರುವ ಕಾರಣ ರೈತರು ಪಹಣಿ, ಆಧಾರ್ ಕಾರ್ಡ್ ತೋರಿಸಿ ಯೂರಿಯಾ ಪಡೆಯಬಹುದಾಗಿದೆ. ಎಕರೆಯೊಂದಕ್ಕೆ 1 ಚೀಲ ಯೂರಿಯಾ ವಿತರಿಸಬೇಕಿದೆ. ಆದರೆ ರೈತರ ಗಲಾಟೆ, ಗೊಂದಲಗಳ ನಡುವೆ ಯೂರಿಯಾ ವಿತರಣೆ ಸ್ಥಗಿತಗೊಂಡಿದೆ.ಎಂಆರ್‌ಪಿ ದರದಲ್ಲೇ ಮಾರಾಟ:
ಇತ್ತೀಚೆಗೆ ತಹಸೀಲ್ದಾರ್ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕರು, ರೈತರು ಕೃಷಿ ಪರಿಕರ, ಬಿತ್ತನೆ ಬೀಜ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಸರಬರಾಜು ಆಗುವ ಎಲ್ಲ ರಸಗೊಬ್ಬರಗಳನ್ನು ಯಾವುದೇ ಜೋಡಣೆ (ಲಿಂಕ್) ಇಲ್ಲದೆ ಎಂಆರ್‌ಪಿ ದರದಲ್ಲಿ ಮಾರಾಟ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಸೂಚನೆ ತಪ್ಪಿದಲ್ಲಿ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ.ಟಿ. ತಿಳಿಸಿದ್ದಾರೆ.ಹೊಳಗುಂದಿ ಸೊಸೈಟಿಗೆ 650 ಯೂರಿಯಾ ರಸಗೊಬ್ಬರ ಬಂದಿದೆ. ವಿತರಣೆಗೆ ಸರ್ವರ್ ಸಮಸ್ಯೆ ಇದೆ. ಪಹಣಿ, ಆಧಾರ್ ಕಾರ್ಡ್ ತೋರಿಸಿ 1 ಎಕರೆಗೆ ಒಂದು ಚೀಲದಂತೆ ವಿತರಿಸಿ, ಪ್ರತಿ ತಿಂಗಳು ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.