ನಿರಂತರ ಮಳೆಯಿಂದ ಬೆಳೆ ರಕ್ಷಣೆಗೆ ರೈತರ ಪರದಾಟ

| Published : Oct 26 2025, 02:00 AM IST

ನಿರಂತರ ಮಳೆಯಿಂದ ಬೆಳೆ ರಕ್ಷಣೆಗೆ ರೈತರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಮಳೆಯಿಂದ ಬೆಳೆ ನೀರಿನಲ್ಲಿ ಕೊಳೆಯುತ್ತಿದೆ. ಅಲ್ಲದೆ, ತೇವಾಂಶ ಹೆಚ್ಚಾಗಿ ಹೊಲದಲ್ಲೇ ಈರುಳ್ಳಿ ಬೆಳೆ ಹಾಳಾಗುತ್ತಿದೆ.

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ: ಮುಂಗಾರು ಬಿತ್ತನೆ ಸಂದರ್ಭದಲ್ಲಿ ಮಳೆಗಾಗಿ ಎದುರು ನೋಡುತ್ತಿದ್ದ ರೈತರು ಈಗ ಮಳೆಯ ವಾತಾವರಣ ಕಂಡು ಬೆಚ್ಚಿಬೀಳುವಂತಾಗಿದೆ. ನಿರಂತರ ಮೋಡಕವಿದ ವಾತಾವರಣ, ತುಂತುರು ಮಳೆಯಿಂದಾಗಿ ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಪರದಾಟ ನಡೆಸುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಿರುವ ಆತಂಕ ಅನ್ನದಾತರಿಗೆ ಎದುರಾಗಿದೆ.

ಒಂದು ಕಾಲಕ್ಕೆ ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡಿಸುವುದು, ಕಂಡ ಕಂಡ ದೇವರಿಗೆ ಪ್ರಸ್ತಾ ಮಾಡುವುದು, ಭಜನೆ ಮಾಡಿದರೂ ಕರಗದ ಮಳೆರಾಯ ಈಗ ಸಾಕಪ್ಪ ಎಂದರೂ ಬಿಡುವು ಕೊಡುತ್ತಿಲ್ಲ. ಇದು ಸಧ್ಯ ತಾಲೂಕು ಮಾತ್ರವಲ್ಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯ ಸ್ಥಿತಿಯಾಗಿದೆ. ಅಕಾಲಿಕ ಮಳೆಗೆ ರೈತರು ಕಂಗೆಟ್ಟು ಹೋಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಹೊಲದಲ್ಲಿ ಬೆಳೆಯಲ್ಲ ಮಳೆ ನೀರಲ್ಲಿ ಕೊಳೆಯುತ್ತಿದ್ದು, ಬೆಳೆಯನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಶಿರಹಟ್ಟಿ ತಾಲೂಕಿನಲ್ಲಿ ಹೆಚ್ಚು ಮಳೆಯಾಶ್ರಿತ ಬೆಳೆಯನ್ನು ಬೆಳೆಯಲಾಗುತ್ತಿದ್ದು, ವರುಣನ ಆರ್ಭಟದಿಂದ ಶೇಂಗಾ, ತೊಗರಿ, ಹತ್ತಿ ಬೆಳೆಯೆಲ್ಲ ನೀರಲ್ಲಿ ಸಿಕ್ಕಿಕೊಂಡು ಕೊಳೆಯುತ್ತಿವೆ.

ಹತ್ತಿ, ತೊಗರಿ ಹೂ ಬಿಡುವ ಹಂತದಲ್ಲಿದ್ದು, ಕೆಲವೆಡೆ ಕಾಯಿ ಕಟ್ಟಿದ ಮಾಹಿತಿಯೂ ಇದೆ. ಸತತ ಮಳೆಯಿಂದ ಸಂಪೂರ್ಣ ಬೆಳೆ ನೆಲಕ್ಕೊರಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತಾಲೂಕಿನಲ್ಲಿ ಮೆಕ್ಕೆಜೋಳ, ಶೇಂಗಾ ನಿರೀಕ್ಷೆ ಮೀರಿ ಬಿತ್ತನೆ ಮಾಡಲಾಗಿದ್ದು, ಎಷ್ಟರ ಮಟ್ಟಿಗೆ ಫಸಲು ರೈತರ ಕೈ ಸೇರುತ್ತದೆ ಎಂಬ ಆತಂಕ ಕಾಡುತ್ತಿದೆ.

ಮೆಕ್ಕೆಜೋಳ, ಹತ್ತಿ, ಹಬ್ಬು ಶೇಂಗಾ ಸೇರಿ ಎಲ್ಲವೂ ಉತ್ತಮ ಇಳುವರಿ ಬರಲು ಮತ್ತು ಕೀಟ, ರೋಗ, ಕಳೆ ತೆಗೆಸಲು ಇಲ್ಲಿಯ ವರೆಗೆ ಹತ್ತಾರು ಸಾವಿರ ಹಣ ವ್ಯಯ ಮಾಡಲಾಗಿದ್ದು, ಮೂರ್ನಾಲ್ಕು ಬಾರಿ ಕೀಟನಾಶಕ ಸಿಂಪಡಿಸಲಾಗಿದೆ. ಮಳೆ ಹೆಚ್ಚಾಗಿರುವುದರಿಂದ ಹೊಲದಲ್ಲಿ ಮತ್ತೆ ಕಳೆ ಬೆಳೆದು ನಿಂತಿದೆ. ಮೆಣಸಿನಕಾಯಿ, ಈರುಳ್ಳಿ ಬೆಳೆ ತೇವಾಂಶ ಹೆಚ್ಚಾಗಿ ಭೂಮಿಯಲ್ಲಿಯೇ ಕೊಳೆಯುತ್ತಿದೆ.

ಅತೀವೃಷ್ಟಿ, ಅನಾವೃಷ್ಟಿ, ಬರಗಾಲ ಅಂತಲೇ ರೈತರು ವರ್ಷವಿಡಿ ಕಾಲ ಕಳೆಯುವಂತಾಗುತ್ತಿದ್ದು, ಮಳೆ ಬಂದರೆ ಸಾಕು ರೈತರ ಎದೆ ಢವ ಢವ ಎನ್ನಲು ಶುರುವಾಗುತ್ತದೆ. ಮಳೆಗೆ ತಾಲೂಕಿನಲ್ಲಿ ಸಾಕಷ್ಟು ಬೆಳೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ಸುರಿಯುತ್ತಿರುವ ಮಳೆಯಲ್ಲಿಯೇ ಕೆಲ ರೈತರು ಕಂಠಿ ಶೇಂಗಾ ಒಕ್ಕಲಿ ಮಾಡಿದ್ದು, ಒಣಗಿಸಿ, ಸ್ವಚ್ಚಗೊಳಿಸಿ ಮಾರಾಟ ಮಾಡಬೇಕು ಎಂದರೆ ಬಿಸಿಲಿನ ದರ್ಶನವೇ ಆಗುತ್ತಿಲ್ಲ. ಬಂದ ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ದರ ಕೂಡ ಸಿಗದೇ ಇರುವುದಕ್ಕೆ ಶೇಂಗಾ ಬೆಳೆದ ರೈತರು ಕಂಗೆಟ್ಟು ಹೋಗಿದ್ದಾರೆ.

ಕಳೆದ ೨೦ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಕಂಠಿ ಶೇಂಗಾ ಸಂಪೂರ್ಣ ನೀರು ನಿಂತು ಕೊಳೆಯುತ್ತಿದೆ. ಬೀಜ, ಗೊಬ್ಬರ, ಕಳೆ ಎಂದು ಹತ್ತಾರು ಸಾವಿರ ಹಣ ಖರ್ಚ ಮಾಡಲಾಗಿದೆ. ಸಧ್ಯ ಫಸಲು ಬಂದಿದ್ದು, ಮಳೆ ಸುರಿಯುತ್ತಿರುವುದರಿಂದ ಒಕ್ಕಲಿ ಮಾಡಲು ಆಗದೇ ಹಾಳಾಗುತ್ತಿದೆ. ಅಲ್ಲಲ್ಲಿ ಮೆಕ್ಕೆಜೋಳ ಒಕ್ಕಲಿ ಮಾಡಿ ರಾಶಿ ಹಾಕಿದ್ದು, ಅಕಾಲಿಕ ಮಳೆಗೆ ಮೊಳಕೆ ಒಡೆದು ವಾಸನೆ ಬೀರುತ್ತಿವೆ. ಸರ್ಕಾರ ನಮ್ಮಂತ ನಿಜವಾದ ರೈತರಿಗೆ ಪರಿಹಾರ ನೀಡುತ್ತಿಲ್ಲ. ನಾವು ಕಷ್ಟದಲ್ಲಿಯೇ ದಿನ ಕಳೆಯುವಂತಾಗಿದೆ ಎನ್ನುತ್ತಾರೆ ರೈತ

ಮಾಲಪ್ಪ ಚವ್ಹಾಣ.

ತಾಲೂಕಿನಲ್ಲಿ ೧೫೦೦ ಹೆಕ್ಟೇರ್ ಪ್ರದೇಶದಲ್ಲಿ ಗೆಜ್ಜೆ ಶೇಂಗಾ, ೨೯.೫೨೬ ಹೆಕ್ಟೇರ್ ಮೆಕ್ಕೆಜೋಳ, ೧೧೦೦ ಹೆಕ್ಟೇರ್ ಬಿಟಿ ಹತ್ತಿ, ೯೫೦ ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. ಈಗಾಗಲೇ ಶೇ. ೪೦ರಷ್ಟು ಮೆಕ್ಕೆಜೋಳ ಒಕ್ಕಲಿ ಮಾಡಲಾಗಿದೆ. ಅಕಾಲಿಕ ಮಳೆಯಿಂದಾಗಿ ಒಕ್ಕಲಿ ಮಾಡಲು ಹಿನ್ನಡೆಯಾಗುತ್ತಿದೆ. ಹಿಂಗಾರು ಬಿತ್ತನೆಗೆ ಬಿಳಿಜೋಳ, ಕಡಲೆ ಬೀಜ ರೈತರಿಗೆ ನೀಡಿದ್ದು, ಮಳೆ ಬಿತ್ತನೆಗೆ ಬಿಡುವು ನೀಡಬೇಕಿದೆ. ಈ ಬಾರಿ ಒಟ್ಟಾರೆ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಮುಂಗಾರು ಬೆಳೆ ಹಾನಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ.