ರೈತ ಭೂಮಿ ಮಡಿಲಿಗೆ ತನ್ನ ಬೇವರ ಹನಿ ಸುರಿಸುತ್ತಾನೆ. ಆ ಬೇವರ ಹನಿಗೆ ಭಾಗ್ಯದ ಫಲ ಅಪೇಕ್ಷಿಸುವುದಿಲ್ಲ

ಕುಕನೂರು: ರೈತರು ಭಾಗ್ಯ ಬಯಸದೆ ಭೂ ತಾಯಿ ಸೇವೆ ಮಾಡುತ್ತಾರೆ ಎಂದು ಸಿಂದಗಿಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಇಟಗಿ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ಮಠದಲ್ಲಿ ಪುರಾಣ ಸೇವಾ ಸಮಿತಿಯಿಂದ ಜರುಗುತ್ತಿರುವ ಶ್ರೀಶರಣಬಸವೇಶ್ವರ ಪುರಾಣದಲ್ಲಿ ರೈತ ದಿನಾಚರಣೆ ಪ್ರಯುಕ್ತ ಮಂಗಳವಾರ ರಾತ್ರಿ ಜರುಗಿದ ರೈತರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರೈತ ಭೂಮಿ ಮಡಿಲಿಗೆ ತನ್ನ ಬೇವರ ಹನಿ ಸುರಿಸುತ್ತಾನೆ. ಆ ಬೇವರ ಹನಿಗೆ ಭಾಗ್ಯದ ಫಲ ಅಪೇಕ್ಷಿಸುವುದಿಲ್ಲ. ಭೂಮಿ ಉಳುಮೆ ಮಾಡಬೇಕು. ಹದ ಗೊಳಿಸಬೇಕು. ಬಿತ್ತನೆ ಮಾಡಬೇಕು. ಕಳೆ ತೆಗೆಯಬೇಕು ಎಂದು ರೈತ ಸದಾ ಬೆಳೆಯ ಚಿಂತೆ ಮಾಡುತ್ತಾನೆ ವಿನಃ. ಬೆಳೆಗೆ ದೊಡ್ಡ ಬೆಲೆ ಪಡೆಯಬೇಕು ಎಂದು ಎಂದಿಗೂ ಅಪೇಕ್ಷಿಸುವುದಿಲ್ಲ. ಆದರೆ ಆತನ ಬೇವರ ಹನಿ ಫಲ ದಲ್ಲಾಳಿಗಳಿಗೆ ಲಾಭದ ಗಂಟಾಗಿ ಪರಿವರ್ತನೆ ಆಗುತ್ತದೆ ವಿನಃ ರೈತನಿಗೆ ಉತ್ತಮ ಧಾರಣೆ ಸಿಗದೆ ಮತ್ತದೇ ಕಷ್ಟ ತಪ್ಪದು. ರೈತನ ಬೆಳೆಗೆ ಉತ್ತಮ ಬೆಲೆ ನಿಜ ಸಂತಸ ಎಂದರು.

ನಾವು ರೈತರು ಎಂದು ಹೇಳಿಕೊಳ್ಳುವ ರೈತರೂ ಸಹ ತಮ್ಮ ಜಮೀನಿನಲ್ಲಿ ಅವಶ್ಯಕವಿರುವ ಬೆಳೆ ಹಾಗೂ ತರಕಾರಿ ಬೆಳೆಯಬೇಕು. ಎಲ್ಲ ರೈತರು ಒಂದೇ ತರಹದ ಬೆಳೆ ಬೆಳೆಯಲು ಮುಂದಾಗಬಾರದು. ಗೋವು, ಎತ್ತು ಸಾಕಬೇಕು. ಅವು ಉತ್ತಮ ಆರೋಗ್ಯದ ಪ್ರತೀಕ ಹಾಗೂ ಆದಾಯದ ಪೂರಕ ಸಹ ಹೌದು. ರೈತ ವರ್ಗದಿಂದ ಧಾರ್ಮಿಕ ಹಾದಿ, ಸಂಸ್ಕೃತೀಯ ಹಾದಿ ಉಳಿದಿವೆ. ಗ್ರಾಮೀಣ ಪ್ರದೇಶದಲ್ಲಿ ಪುರಾಣಗಳು ನಡೆಯಬೇಕಾದರೆ ಅವುಗಳು ಸಹ ನಮ್ಮ ಸುಸಂಸ್ಕೃತಿ ಪ್ರತಿಬಿಂಬಿಸುತ್ತವೆ. ರೈತ ವರ್ಗಕ್ಕೆ ನಾನಾ ಕಾರ್ಯಕ್ರಮದಲ್ಲಿ ಸನ್ಮಾನ ಮಾಡುವುದರಿಂದ ಸಹ ರೈತನಾಗಬೇಕೆಂಬ ಹಂಬಲ ಯುವ ಪೀಳಿಗೆಯಲ್ಲಿ ಒಡಮೂಡುತ್ತದೆ. ಸಂಬಳದ ಬೆನ್ನು ಬಿದ್ದು ಮಾನಸಿಕ ಒತ್ತಡದಲ್ಲಿ ದುಡಿಯುವ ಬದಲು ರೈತನಾಗಿ ನೆಮ್ಮದಿಯಾಗಿ ಭೂ ತಾಯಿಯ ಸೇವೆ ಮಾಡಲು ಮುಂದಾಗಬೇಕು ಎಂದರು.

ಗ್ರಾಪಂ ಮಾಜಿ ಸದಸ್ಯ ಲಕ್ಷ್ಮಣ ಕೋರಿ ಮಾತನಾಡಿ, ಶರಣಬಸವೇಶ್ವರ ಪುರಾಣದಲ್ಲಿ ರೈತರ ಬಿತ್ತನೆ ಸಾಮಗ್ರಿ, ಕೂರಿಗೆ ಹಾಗೂ ಕುಂಟೆ ಹರಾಜು ಮಾಡುತ್ತಾರೆ. ಇದರಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹ ಕೃಷಿ ಕಾರ್ಯಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಹಿಮ್ಮುಖ ಆಗುತ್ತಿರುವ ಕೃಷಿ ಕೆಲಸಕ್ಕೆ ಪ್ರೇರಣಾ ಕಾರ್ಯ ಬೇಕಾಗಿದೆ. ಅಂತಹ ಕಾರ್ಯ ಹೆಚ್ಚು ಹೆಚ್ಚು ಆಗಬೇಕು. ಆ ನಿಟ್ಟಿನಲ್ಲಿ ರೈತರಿಗೆ ಸನ್ಮಾನ ಹಾಗೂ ಪುರಾಣದಲ್ಲಿ ಕೃಷಿ ಸಾಮಗ್ರಿ ಹರಾಜು ಮಾಡುವುದು ಸಹ ಕೃಷಿ ಪ್ರೇರಣಾ ಕಾರ್ಯ ಎಂದರು.

ಬಸವನಗೌಡ ಮುದ್ದಾಬಳ್ಳಿ ಹಾಗೂ ಸಂಗಡಿಗರು ಹಂತಿಪದ ಪ್ರಸ್ತುತಪಡಿಸಿದರು. ಗ್ರಾಮದ 70 ವರ್ಷ ಮೇಲ್ಪಟ್ಟ ಸುಮಾರು 40 ರೈತರಿಗೆ ಈ ವೇಳೆ ಸನ್ಮಾನಿಸಲಾಯಿತು.

ಪುರಾಣಿಕರಾದ ಅಕ್ಕಮಹಾದೇವಿ, ಉಮಾಪತಿ ಶಾಸ್ರ್ತೀ, ಖಾದರಸಾಬ್ ಬಳಗೇರಿ, ಶ್ರೀ ಜಗದ್ಗುರು ತೋಂಟದಾರ್ಯ ಪುರಾಣ ಸೇವಾ ಸಮಿತಿ ಅಧ್ಯಕ್ಷ ಕಳಕನಗೌಡ್ರು ಸಾದರ, ಸಾಹಿತಿ ಬಿ.ಎಂ ಹಳ್ಳಿ, ಅಂದಪ್ಪ ಹುರುಳಿ, ವಜೀರಸಾಬ್ ತಳಕಲ್, ಮಲ್ಲಪ್ಪ ಹೊಂಬಳ, ನಿವೃತ್ತ ಶಿಕ್ಷಕ ಅಂದಾನಪ್ಪ ಅಂಗಡಿ, ಮುತ್ತಯ್ಯ ಕಳ್ಳಿಮಠ, ಕೆಜೆ ಮುಲ್ಲಾ, ವೆಂಕನಗೌಡ ಹಳ್ಳೂರು, ಗವಿಸಿದ್ದಪ್ಪ ಮುದ್ದಾಬಳ್ಳಿ, ಸಿದ್ಲಿಂಗಯ್ಯ ಬಳಗಾನೂರಮಠ, ದೊಡ್ಡಬಸವನಗೌಡ ಮುದ್ದಾಬಳ್ಳಿ ಶಿವಪ್ಪ ಗುಳಗಣ್ಣವರ, ಭೀಮಪ್ಪ ಅಳಪ್ಪನವರ, ವಾಸವರಾವ ಮರಾಠಿ, ಶಾಂತಯ್ಯ ಕಂತಿಮಠ, ಪುರಾಣ ಸೇವಾ ಸಮಿತಿಯವರು ಹಾಗೂ ಸೇವಾ ಸಮಿತಿಯ ಅಕ್ಕನ ಬಳಗದವರು ಹಾಗೂ ಗ್ರಾಮಸ್ಥರಿದ್ದರು.