ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬು ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆಯಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಪರಿಕರ ಮಾರಾಟಗಾರರ ಸಂಘ ಹಾಗೂ ಇಫ್ಕೋ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಭತ್ತದ ಸುಧಾರಿತ ಬೇಸಾಯ ಪದ್ಧತಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯ ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಬೇಸಾಯದಲ್ಲಿ ಲಘು ಪೋಷಕಾಂಶಗಳು ಮತ್ತು ಜೈವಿಕ ಗೊಬ್ಬರಗಳನ್ನು ತಪ್ಪದೇ ಬಳಕೆ ಮಾಡಿ ರೈತರು ಬೆಳೆ ಬೆಳೆಯಬೇಕು. ರೈತ ಉತ್ಪಾದಕ ಸಂಸ್ಥೆಗಳ ಮೂಲಕವೇ ಮಾರಾಟ ಮಾಡಿದರೆ ರೈತನಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿ ಅಧಿಕ ದರ ದೊರೆಯಲಿದೆ ಎಂದರು.ಪ್ರಸ್ತುತ ಕೃಷಿಯಲ್ಲಿ ಯಥೇಚ್ಚವಾಗಿ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಹಾಗೂ ಕಳೆನಾಶಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುವ ಜತೆಗೆ ಮಣ್ಣಿನ ಸೂಕ್ಷ್ಮಾಣು, ಜೀವಾಣುಗಳು ಹಾಗೂ ಎರೆಹುಳುಗಳು ಸಹ ಸಾವನ್ನಪ್ಪುತ್ತವೆ. ಆದ್ದರಿಂದ ಇವುಗಳ ಬಳಕೆಯನ್ನು ವಿವೇಚನಾತ್ಮಕವಾಗಿ ಬಳಕೆ ಮಾಡಬೇಕು. ಇದರಿಂದ ಪ್ರಕೃತಿಯ ಜತೆಗೆ ಮಾನವನಿಗೂ ಹಾನಿ ಉಂಟಾಗುತ್ತಿದೆ ಎಂದು ಹೇಳಿದರು.
ಹರಳು ರೂಪದ ಯೂರಿಯಾ ಬಳಕೆಯಿಂದ ಹಲವು ದುಷ್ಪರಿಣಾಮಗಳಾಗುತ್ತಿವೆ. ಮಣ್ಣಿನಲ್ಲಿ ಆಮ್ಲೀಯತೆ ಹೆಚ್ಚಾಗುವುದು, ಪರಿಸರದಲ್ಲಿ ಅಂತರ್ಜಲ ಮಾಲಿನ್ಯ ಹಾಗೂ ಯುಟ್ರೋಫ್ರಿಕೇಷನ್, ಮಾನವನ ಆರೋಗ್ಯದಲ್ಲಿ ಕ್ಯಾನ್ಸರ್ ಕಾರಕ ಹಾಗೂ ಬ್ಲ್ಯೂಬೇಬಿ ಸಿಂಡ್ರೋಮ್ ಕಾಣಿಸಿಕೊಳ್ಳುತ್ತವೆ. ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆ ಮಾಡಿದಲ್ಲಿ ಹರಳು ಯೂರಿಯಾ ಗೊಬ್ಬರಕ್ಕಿಂತ ಶೇ. 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ಒದಗಿಸುತ್ತದೆ. ರಸಗೊಬ್ಬರ ಬಳಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿ ಮಣ್ಣಿನಲ್ಲಿ ಸುಧಾರಣೆಯಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಯಲದ ವಿಜ್ಞಾನಿ ಡಾ.ಸನತ್ ಕುಮಾರ್ ಮಾತನಾಡಿದರು. ಇದೇ ವೇಳೆ ಡ್ರೋನ್ ಮೂಲಕ ರಸಗೊಬ್ಬರ ಮತ್ತು ಪೀಡೆನಾಶಕ ಸಿಂಪರಣೆ ಬಗ್ಗೆ ಇಫ್ಕೋ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಇದರ ಬಳಕೆಯಿಂದ ಆಗುವ ಉಪಯೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಕಾರ್‍ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.