ಕನ್ನಡಪ್ರಭ ವಾರ್ತೆ ರಾವಂದೂರು

ಬೆಳೆಗಾರರ ಹಿತ ಕಾಪಾಡುವಲ್ಲಿ ತಂಬಾಕು ಮಂಡಳಿ ವಿಫಲವಾಗಿದೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ಕೊತ್ತವಳ್ಳಿ ಕೊಪ್ಪಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.

ತಾಲೂಕಿನ ರೈತರು ತಂಬಾಕು ಬೆಳೆಗಿಂತಲೂ ಪರ್ಯಾಯ ಬೆಳೆಯನ್ನು ಕಂಡುಕೊಳ್ಳಬೇಕು, ಇಲ್ಲದಿದ್ದರೆ ರೈತರ ಬದುಕು ಶೋಚನೀಯವಾಗುತ್ತದೆ, ಏಕೆಂದರೆ ಕೇಂದ್ರ ಸರ್ಕಾರವು ತಂಬಾಕನ್ನು ಖರೀದಿಸಲು ತಾರತಮ್ಯ ಮಾಡುತ್ತಿದೆ, ಬಹುತೇಕ ತಂಬಾಕು ಮಾರುಕಟ್ಟೆಯನ್ನು ನಿಲ್ಲಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ರೀತಿ ಧೋರಣೆ ಮಾಡುತ್ತಿದೆ, ಕೆಲವರು ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮಂತ್ರಿಗಳ ಹತ್ತಿರ ಹೋಗಿ ತಂಬಾಕು ಬೆಳೆಗಾರರ ರೈತರ ಸಮಸ್ಯೆಗಳನ್ನು ಬಗೆಹರಿಸದೆ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ತಂಬಾಕು ಮಂಡಳಿ ನಿಗದಿಪಡಿಸಿದ ಕೆಜಿಗಿಂತಲೂ ಕಡಮೆ ಬೆಳೆಯಿರಿ, ಇದರ ಜೊತೆಗೆ ರೇಷ್ಮೆ ಬೆಳೆಯನ್ನು ಸಹ ಬೆಳೆಯಿರಿ, ಈ ಬೆಳೆಗೆ ಉತ್ತಮ ಬೆಲೆ ಇದ್ದು, ಜೊತೆಗೆ ರಾಜ್ಯ ಸರ್ಕಾರವು ಸಹ ಪ್ರೋತ್ಸಾಹವನ್ನು ನೀಡುತ್ತಿದೆ, ಆದ್ದರಿಂದ ತಾಲೂಕಿನ ರೈತರು ಈಗಲೇ ಎಚ್ಚೆತ್ತು ಪರ್ಯಾಯ ಬೆಳೆಯನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.


ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಕೆ. ಹೋಲದಪ್ಪ, ಮೈಮುಲ್ ನಿರ್ದೇಶಕ ಪ್ರಕಾಶ್, ಗ್ರಾಪಂ ಅಧ್ಯಕ್ಷ ರಾಜೇಗೌಡ, ಕಿತ್ತೂರು ವಿಎಸ್ಎಸ್ ಎನ್ ಅಧ್ಯಕ್ಷ ಸಚಿನ್, ಗಂಗಾಧರ್, ಮಲ್ಲಿಕಾ, ಪುಟ್ಟ ಮಾದೇಗೌಡ, ಪುಟ್ಟರಾಜ್, ಜಯಚಂದ್ರ, ಕೀರ್ತಿ, ತಹಸೀಲ್ದಾರ್‌ ನಿಸರ್ಗ ಪ್ರಿಯ, ತಾಪಂ ಇಒ ಸುನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ. ಪ್ರಶಾಂತ್, ಸೋಮಯ್ಯ, ಸುಕನ್ ರಾಜ್, ದಿನೇಶ್ ಇದ್ದರು.