ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು-ಮನಗೂಳಿ

| Published : Aug 09 2025, 12:02 AM IST

ಸಾರಾಂಶ

ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೈಸರ್ಗಿಕ ಕೃಷಿ ಎಂಬುದು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ಮತ್ತು ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಹೇಳಿದರು.

ಶಿರಹಟ್ಟಿ: ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೈಸರ್ಗಿಕ ಕೃಷಿ ಎಂಬುದು ಜಾನುವಾರು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ಮತ್ತು ಭಾರತೀಯ ಸಂಪ್ರದಾಯದಲ್ಲಿ ಬೇರೂರಿರುವ ರಾಸಾಯನಿಕ ಮುಕ್ತ ಕೃಷಿ ವ್ಯವಸ್ಥೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಹೇಳಿದರು. ತಾಲೂಕಿನ ಗುಚ್ಚ ಗ್ರಾಮಗಳಾದ ಬನ್ನಿಕೊಪ್ಪ, ತಾರಿಕೊಪ್ಪ, ಮಾಚೇನಹಳ್ಳಿ ಹಾಗೂ ಸುಬ್ನಳ್ಳಿ ಗ್ರಾಮದ ರೈರ ಮತ್ತು ರೈತ ಮಹಿಳೆಯರಿಗೆ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ಸುಗ್ನಳ್ಳಿ ಗ್ರಾಮದ ಡಾ. ಬಸವರಾಜ ನಾವ್ಹಿ ಇವರ ತೋಟದಲ್ಲಿ ನೈಸರ್ಗಿಕ ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೃಷಿ ವಿಜ್ಞಾನಿಗಳು ರೈತರಿಗಾಗಿ ಹೊಸ ಹೊಸ ತಳಿಗಳ ಜತೆಗೆ ವಿವಿಧ ತಾಂತ್ರಿಕತೆಗಳನ್ನು ಕಂಡುಹಿಡಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರೈತರು ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಆರ್ಥಿಕವಾಗಿ ಲಾಭದಾಯಕ ಕೃಷಿ ಮಾಡಬಹುದು ಎಂದು ಸಲಹೆ ನೀಡಿದರು. ಉತ್ತಮ ತಳಿಗಳ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದರು.

ವಿಪರೀತ ರಾಸಾಯನಿಕ ಬಳಕೆಯಿಂದ ಇಂದು ಕೃಷಿ ಭೂಮಿ ಕಲುಷಿತಗೊಳ್ಳುತ್ತಿದೆ. ರೈತರು ಸಾವಯವ ಕೃಷಿಯತ್ತ ಹೆಚ್ಚು ಗಮನಹರಿಸಬೇಕು. ಮನುಷ್ಯ ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಕಾಲಕಾಲಕ್ಕೆ ಕೃಷಿ ಭೂಮಿಯ ಮಣ್ಣನ್ನು ಪರೀಕ್ಷೆ ಮಾಡಿಸಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು. ಪ್ರಾಚೀನ ಕೃಷಿ ಪದ್ಧತಿಯೊಂದಿಗೆ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ರೈತರ ಆದಾಯ ಹೆಚ್ಚಳವಾದರೆ ದೇಶ ಸಮೃದ್ಧವಾಗುತ್ತದೆ. ರೈತರು ಋತುಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಬೇಕು. ರೈತರ ಶ್ರೆಯೋಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ಶ್ರಮಿಸುತ್ತಿವೆ. ಕೃಷಿಕರು ಪಾರಂಪರಿಕ ವಿಧಾನಗಳ ಮೂಲಕ ಕೃಷಿ ಕಾರ್ಯ ಕೈಗೊಳ್ಳಬೇಕು ಎಂದರು. ಇದೇ ವೇಳೆ ಮಣ್ಣು ಮತ್ತು ನೀರಿನ ಕುರಿತು ಬೆಳಕು ಚೆಲ್ಲಿದರು. ಮಣ್ಣಿನ ಆರೋಗ್ಯ ಕಾಪಾಡಿದಲ್ಲಿ ಮಾತ್ರ ರೈತರು ಆರೋಗ್ಯಕರ ಬೆಳೆಯನ್ನು ಬೆಳೆದು ತಮ್ಮ ಆರೋಗ್ಯವನ್ನು ಕಾಪಾಡಬಹುದೆಂದು ಹಾಗೂ ದೇಸೀಯ ಬೀಜ ತಳಿಗಳನ್ನು ಸಂರಕ್ಷಣೆ ಮಾಡಲು ತಿಳಿಸಿದರು. ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ಸ್ಫೂರ್ತಿ ಜಿ.ಎಸ್. ಮಾತನಾಡಿ, ಒಂದು ಒಳ್ಳೆಯ ಆರೋಗ್ಯಕರ ಬೆಳೆಯನ್ನು ಬೆಳೆಯಲು ಬೆಳೆಗಳಿಗೆ ಸುಮಾರು ೧೬ ಪೋಷಕಾಂಶಗಳು ಬೇಕಾಗುತ್ತವೆ. ಆದರೆ ರೈತರು ಗೊಬ್ಬರವೆಂದರೆ ಯೂರಿಯಾ ಮತ್ತು ಡಿಎಪಿ ಎಂಬ ತಪ್ಪು ಕಲ್ಪನೆಯಿಂದ ಬೆಳೆಗೆ ಸಾರಜನಕ ಮತ್ತು ರಂಜಕ ಪೋಷಕಾಂಶ ನೀಡಿ ಉಳಿದ ಪೋಷಕಾಂಶಗಳ ಕೊರತೆಯಿಂದ ಸರಿಯಾದ ಪೋಷಕಾಂಶ ಸಿಗದೇ ಬೆಳೆಗಳು ನಿರೀಕ್ಷಿತ ಇಳುವರಿ ಬಾರದಿರಲು ಕಾರಣವಾಗಿದೆ ಎಂದರು. ಆದ್ದರಿಂದ ಮಣ್ಣಿನಲ್ಲಿರುವ ಪೋಷಕಾಂಷಗಳನ್ನು ನಿರ್ವಹಿಸಲು ದೇಸಿ ಹಸುವಿನ ಸಗಣಿ ಹಾಗೂ ಗಂಜಲ ಮಣ್ಣಿನಲ್ಲಿರುವ ಸಾವಯವ ಇಂಗಾಲವನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದ ಅವರು, ನೈಸರ್ಗಿಕ ಕೃಷಿ ಅಭಿಯಾನದ ಯೋಜನೆಯ ಮಾರ್ಗಸೂಚಿ ಹಾಗೂ ಉದ್ದೇಶ ಕುರಿತು ಸಮಗ್ರ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕಿ (ವಿಷಯ ತಜ್ಞರು) ಮೇಘನಾ ನಾಡಗೇರ ಮಾತನಾಡಿ, ಯೋಜನೆಯ ರೂಪುರೇಷಗಳನ್ನು ತಿಳಿಸಿದರಲ್ಲದೆ ಯೋಜನೆಯಡಿ ನೋಂದಾಯಿಸಿದ ಎಲ್ಲ ರೈತರು ಮತ್ತು ರೈತ ಮಹಿಳೆಯರು ಕನಿಷ್ಠ ೧ ಎಕರೆ ವಿಸ್ತ್ರೀರ್ಣದಲ್ಲಿ ಕ್ಷೇತ್ರ ಮಟ್ಟದಲ್ಲಿ ಲಭ್ಯವಿರುವ ಪರಿಕರಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಲಹೆ ನೀಡಿದರು. ಡಾ. ಬಸವರಾಜ ನಾವ್ಹಿ ಅವರು ಸುಮಾರು ೮-೧೦ ವರ್ಷಗಳಿಂದ ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು ಜಿಲ್ಲೆಗೆ ಮಾದರಿ ಸಾವಯವ ರೈತರಾಗಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಕೃಷಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿರುತ್ತದೆ. ಅವರಿಗೆ ಸದರಿ ಯೋಜನೆಯಡಿ ಮಾಸ್ಟರ್ ಟ್ರೇನರ್ ಆಗಿ ನೇಮಕ ಮಾಡಲಾಗಿದೆ. ಅವರು ಪ್ರಾತ್ಯಕ್ಷಿಕೆ ಮುಖಾಂತರ ಪಂಚಗವ್ಯ, ಜೀವಾಮೃತ, ಘನ ಜೀವಾಮೃತ, ಬೀಜಾಮೃತ, ದಶಪರ್ಣಿ ಕಶಾಯ ಮತ್ತು ಇತರೆ ಸಾವಯವ ಪರಿಕರಗಳನ್ನು ತಯಾರಿಸುವ ಮೂಲಕ ಹಾಜರಿದ್ದ ರೈತ ಮತ್ತು ರೈತ ಮಹಿಳೆಯರಿಗೆ ಸಾವಯವ ಕೃಷಿ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಡಾ. ಬಸವರಾಜ ನಾವ್ಹಿ, ಪ್ರಗತಿಪರ ರೈತ ಪ್ರಸಾದ ಆಡಿನ ಮಾತನಾಡಿದರು. ಕೃಷಿ ಅಧಿಕಾರಿ ಎಸ್.ಬಿ. ಲಮಾಣಿ, ಆತ್ಮ ತಾಲೂಕು ವ್ಯವಸ್ಥಾಪಕ ಎಂ.ಎಸ್. ಪೂಜಾರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದೇವರಾಜ ಅಚಲಕರ, ಈರಣ್ಣ ಉಪ್ಪಾರ ಹಾಗೂ ವಿವಿಧ ಗ್ರಾಮಗಳ ಕೃಷಿ ಸಖಿಯರು ಪಾಲ್ಗೊಂಡಿದ್ದರು.