ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬು ದರ ನಿಗದಿ ಕುರಿತಂತೆ ಸರ್ಕಾರದೊಂದಿಗೆ ನಡೆದ ಮಾತುಕತೆ ಸದ್ಯಕ್ಕೆ ಅಂತ್ಯಗೊಂಡಿದ್ದರೂ, ರೈತರ ಹೋರಾಟ ಸುಖಾಂತ್ಯ ಕಂಡಿಲ್ಲ ಎಂದು ರೈತ ಮುಖಂಡ ಚುನಪ್ಪ ಪೂಜೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬು ದರ ನಿಗದಿ ಕುರಿತಂತೆ ಸರ್ಕಾರದೊಂದಿಗೆ ನಡೆದ ಮಾತುಕತೆ ಸದ್ಯಕ್ಕೆ ಅಂತ್ಯಗೊಂಡಿದ್ದರೂ, ರೈತರ ಹೋರಾಟ ಸುಖಾಂತ್ಯ ಕಂಡಿಲ್ಲ ಎಂದು ರೈತ ಮುಖಂಡ ಚುನಪ್ಪ ಪೂಜೇರಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ಟನ್‌ಗೆ ₹3,500 ದರ ನೀಡಲು ಒಪ್ಪಿಕೊಂಡಿದ್ದು, ರೈತರು ಪ್ರತಿ ಕೆ.ಜಿ ಸಕ್ಕರೆಗೆ ₹50 ಕನಿಷ್ಠ ಮಾರಾಟ ಬೆಲೆ ನಿಗದಿ ಮಾಡಿ, ಕಬ್ಬಿಗೆ ಟನ್‌ಗೆ ₹4,000 ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದರ ನಿಗದಿಗೆ ಕಾರ್ಖಾನೆ ಮಾಲೀಕರು ಇನ್ನೆರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಅಲ್ಲಿಯವರೆಗೆ ಗುರ್ಲಾಪುರದಲ್ಲಿ ರೈತರ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಹಿಂದಿನ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿರುವ ಭರವಸೆಯಂತೆ ಬುಧವಾರವೇ ಕಾರ್ಖಾನೆ ಮಾಲೀಕರ ಸಭೆ ಕರೆದು ಪ್ರತಿ ಕೆ.ಜಿ ಸಕ್ಕರೆಗೆ ₹50 ಕನಿಷ್ಠ ಮಾರಾಟ ಬೆಲೆ ನಿಗದಿ ಮಾಡುವ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಡೀ ದಿನ ರೈತರ ಸಮಸ್ಯೆ ಆಲಿಸಲು ಸಮಯ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಅವರು, ಎರಡು ದಿನಗಳ ಬಳಿಕ ಸಚಿವರು ಹಾಗೂ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿ ಮತ್ತೊಂದು ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಬೇಕು. ಅಲ್ಲದೆ, ಟನ್‌ಗೆ ₹1,000 ಪ್ರೋತ್ಸಾಹ ಧನ ನೀಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರೈತರ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.