ಹಾವೇರಿ: ಮುಂಗಾರು ಹಂಗಾಮಿಗೆ ಸೋಯಾಬಿನ್‌ ಬಿತ್ತನೆ ಬೀಜಕ್ಕಾಗಿ ಪರದಾಟ ಮೂರನೇ ದಿನವಾದ ಶನಿವಾರವೂ ಮುಂದುವರಿದಿದೆ. ರೈತ ಸಂಪರ್ಕ ಕೇಂದ್ರಗಳ ಎದುರು ಉದ್ದದ ಸಾಲು, ಅಧಿಕಾರಿಗಳೊಂದಿಗೆ ರೈತರ ವಾಗ್ವಾದ, ಪರಿಸ್ಥಿತಿ ನಿಯಂತ್ರಿಸುತ್ತಿರುವ ಪೊಲೀಸರು, ಬೀಜ ಸಿಗದೇ ಸರ್ಕಾರದ ವಿರುದ್ಧ ರೈತರ ಆಕ್ರೋಶವೂ ಮುಂದುವರಿದಿದೆ.

ನಗರದ ರೈತ ಸಂಪರ್ಕ ಕೇಂದ್ರಕ್ಕೆ ಹೊಂದಿಕೊಂಡಿರುವ ಗೋದಾಮಿನ ಎದುರು ಶನಿವಾರ ಬೆಳಗ್ಗೆಯಿಂದಲೇ ರೈತರ ಕ್ಯೂ ಹೆಚ್ಚಾಗಿತ್ತು. ಬೆಳಗ್ಗೆ 9.30ರ ನಂತರ ಕೃಷಿ ಇಲಾಖೆ ಸಿಬ್ಬಂದಿ ಬಿತ್ತನೆ ಬೀಜ ವಿತರಿಸಲು ಪ್ರಾರಂಭ ಮಾಡಿದರೂ ಸಹಿತ, ಸರದಿ ಸಾಲಿನಲ್ಲಿ ನಿಂತಿದ್ದ ರೈತರಿಂದ ದಾಂಧಲೆ, ಮಾತಿನ ಚಕಮಕಿ, ತಳ್ಳಾಟ, ನೂಕಾಟ ಹೆಚ್ಚಾಗಿದ್ದು ಕಂಡುಬಂದಿತು. ಪೊಲೀಸರು ರೈತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದರು. ರೈತರ ಗಲಾಟೆ ಹೆಚ್ಚಾಗುತ್ತಿದ್ದರಿಂದ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಮಧ್ಯಾಹ್ನದ ವೇಳೆ ಕೆಲ ಹೊತ್ತು ವಿತರಣೆ ಕಾರ್ಯವನ್ನು ಬಂದ್ ಮಾಡಿಸಿದರು. ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದ ಬಳಿಕ ಬೀಜ ವಿತರಣೆ ಕಾರ್ಯ ನಡೆಯಿತು. ನೂಕುನುಗ್ಗಲಿನಲ್ಲೇ ರೈತರು ಅಗತ್ಯ ದಾಖಲೆಗಳನ್ನು ನೀಡಿ ಸೋಯಾಬಿನ್ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.ರೈತರ ಆಕ್ರೋಶ: ಜಿಲ್ಲೆಯ ವಿವಿಧ ಭಾಗಗಳ ಕೃಷಿ ಕೇಂದ್ರಗಳಲ್ಲೂ ಬಿತ್ತನೆ ಬೀಜಕ್ಕಾಗಿ ಹಗಲು-ರಾತ್ರಿ ನೂಕುನುಗ್ಗಲು ಉಂಟಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಬೀಜ ಪೂರೈಕೆ ಆಗದ ಹಿನ್ನೆಲೆಯಲ್ಲಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಅಗತ್ಯ ಪ್ರಮಾಣದ ಬೀಜ ಪೂರೈಕೆ ಮಾಡಿ, ಸಮರ್ಪಕವಾಗಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.