ರೈತರ ಹಲವು ಬೇಡಿಕೆ ಈಡೇರಿಕೆಗೆ ರೈತಸಂಘ ಪ್ರತಿಭಟನೆ

| Published : Aug 15 2024, 01:46 AM IST

ಸಾರಾಂಶ

ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹಳೆಯ ಪ್ರವಾಸಿ ಮಂದಿರದಿಂದ ರೈತಸಂಘದ ಕಾರ್ಯಕರ್ತರು ಮೆರವಣಿಗೆ ಹೊರಟು ಮೈಸೂರು-ಊಟಿ ಹೆದ್ದಾರಿಯ ಸಾರಿಗೆ ಬಸ್‌ ನಿಲ್ದಾಣದ ಬಳಿ ರಸ್ತೆತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ರೈತಸಂಘದ ಮುಖಂಡ ಡಾ. ಗುರುಪ್ರಸಾದ್‌ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿರುವ ರೆಸಾರ್ಟ್‌, ಹೋಂಸ್ಟೇಗಳ ತೆರವುಗೊಳಿಸಬೇಕು. ಓವರ್‌ ಲೋಡ್‌ ಕಲ್ಲು ತುಂಬಿದ ಟಿಪ್ಪರ್‌ಗಳು ಓಡಾಟ ಮಾಡುತ್ತಿವೆ ಎಂದು ಆರೋಪಿಸಿದರು. ರೈತರು ಪಡೆದ ಸಾಲಕ್ಕೆ ಹಾಲಿನ ಪ್ರೋತ್ಸಾಹ ಧನ, ಪಿಂಚಣಿ, ಬರ ಪರಿಹಾರದ ಹಣ ಕಡಿತ ಮಾಡುತ್ತಿದ್ದಾರೆ ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಾಲಕ್ಕೆ ಜಮಾ ಮಾಡಿಕೊಳ್ಳುವುದು ನಿಲ್ಲಬೇಕು ಎಂದರು.

ಖಾಸಗಿ ಫೈನಾನ್ಸ್‌ ಕಂಪನಿಗಳು ರೈತರು, ಕೃಷಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ಮನೆ ಮುಂದೆ ಬಂದು ದುಡ್ಡು ಕೇಳುತ್ತಿದ್ದಾರೆ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಲೀಡ್‌ ಬ್ಯಾಂಕ್‌ ಅಧಿಕಾರಿಗಳಿಗೆ ಆಗ್ರಹಿಸಿದರು.

28ರಂದು ರೈತರ ಸಭೆ

ರೈತರ ಆರೋಪಗಳಿಗೆ ಉತ್ತರಿಸಿದ ಆರ್‌ಎಫ್‌ಒ ಕೆ.ಪಿ.ಸತೀಶ್‌ ಕುಮಾರ್‌, ಅಕ್ರಮ ರೆಸಾರ್ಟ್‌ ತೆರವು ಸಂಬಂಧ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ಅಲ್ಲದೆ ರೈತರ ಸಮಸ್ಯೆಗಳ ಸಂಬಂಧ ಮುಂಬರುವ ಆ.28ರಂದು ರೈತರ ಸಭೆ ನಡೆಸುವುದಾಗಿ ಭರವಸೆ ನೀಡಿದರು. ತಾಲೂಕಿನಲ್ಲಿ ಮಳೆಗೆ ಬಹುತೇಕ ಕೆರೆಗಳು ತುಂಬಿವೆ. ಉಳಿದ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದು ಎಂಜಿನಿಯರ್‌ ಮಹೇಶ್‌ ರೈತರಿಗೆ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾಡ್ರಹಳ್ಳಿ, ರೈತಸಂಘದ ಮುಖಂಡರಾದ ಕುಂದಕೆರೆ ಸಂಪತ್ತು, ಮಹೇಶ್‌, ಚಿಕ್ಕಣ್ಣ, ಮಹೇಶ್‌, ಹೊಸೂರು ಮಹೇಶ್‌ ಸೇರಿದಂತೆ ಹಲವರಿದ್ದರು.

ಪಿಐ ಮೋಹಿತ್‌ ಸಹದೇವ್‌ ರೈತ ವಿರೋಧಿ

ಪ್ರತಿಭಟನೆಯಲ್ಲಿ ಗುರುಪ್ರಸಾದ್‌ ವಾಗ್ದಾಳಿ! ನೂತನವಾಗಿ ಗುಂಡ್ಲುಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಮೋಹಿತ್‌ ಸಹದೇವ್‌ ಬರಲಿದ್ದು, ಬಂದ ಬಳಿಕ ಸಾರ್ವಜನಿಕರಿಗೆ ದಂಡ ಯಾವ ರೀತಿ ಬೀಳುತ್ತೇ, ರೈತರ ಮೇಲೆ ಯಾವ ರೀತಿ ಕೇಸು ಹಾಕ್ತಾನೆ ಆತ ಎಂದು ನೋಡ್ತಾಯಿರಿ ಎಂದು ರೈತಸಂಘದ ಮುಖಂಡ ಡಾ. ಗುರುಪ್ರಸಾದ್‌ ಮೋಹಿತ್‌ ಸಹದೇವ್‌ ಮೇಲೆ ಹರಿಹಾಯ್ದರು. ಪ್ರತಿಭಟನೆ ವೇಳೆಯಲ್ಲಿ ಮಾತನಾಡಿದ ಅವರು, 10 ರಿಂದ 12 ದಿನಗಳಲ್ಲಿ ಗುಂಡ್ಲುಪೇಟೆಗೆ ಶುದ್ಧ ಅವಿವೇಕಿ ಮತ್ತು ರೈತ ವಿರೋಧಿ ಮೋಹಿತ್‌ ಸಹದೇವ್‌ ಪಿಐ ಆಗಿ ಬಂದು ಇಲ್ಲಿ ಆಯಕಟ್ಟಿನ ಸ್ಥಳದಲ್ಲಿ ಬಂದು ಕುಳಿತುಕೊಳ್ಳುತ್ತಾನೆ ಎಂದು ಕಿಡಿ ಕಾರಿದರು. ಮೋಹಿತ್‌ ಸಹದೇವ್‌ ಇನ್ನೂ ಗುಂಡ್ಲುಪೇಟೆಗೆ ಬಂದಿಲ್ಲ, ಬರುವ ಮುನ್ನವೇ ರೈತಸಂಘದ ಮುಖಂಡ ಗುರುಪ್ರಸಾದ್‌ ಟೀಕಿಸಿದ್ದಾರೆ.