ಸಾರಾಂಶ
ಕಳೆದ ವರ್ಷ ಜಲಾಶಯದಲ್ಲಿ ಇರುವ ನೀರನ್ನು ತಮಿಳುನಾಡು ಹಿತ ಕಾಯಲು ಸರ್ಕಾರ ನದಿ ಮೂಲಕ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಬೇಸಿಗೆ ಹಂಗಾಮು ಬೆಳೆಗೂ ನೀರು ಕೊಡದೆ ಮೋಸ ಮಾಡಿತು. ಈಗ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಿ ಬೆಳೆ ಬೆಳೆಯಲು ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ನೀರಾವರಿ ಸಚಿವರು ಸೇರಿದಂತೆ ಸರ್ಕಾರದ ಮಂತ್ರಿಗಳು ಜಿಲ್ಲೆಯ ರೈತರಿಗೆ ನೀರು ಹರಿಸದೆ ಬರಡು ಭೂಮಿ ಮಾಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ತಕ್ಷಣ ನೀರು ಹರಿಸುವಂತೆ ಒತ್ತಾಯಿಸಿ ಭೂಮಿತಾಯಿ ಹೊರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ರೈತ ಮುಖಂಡ ಕೆ.ಎಸ್ ನಂಜುಡೇಗೌಡ ನೇತೃತ್ವದಲ್ಲಿ ಸಮಿತಿ ಸದಸ್ಯರು ಹಾಗೂ ರೈತರು ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಳೆದ ವರ್ಷ ಜಲಾಶಯದಲ್ಲಿ ಇರುವ ನೀರನ್ನು ತಮಿಳುನಾಡು ಹಿತ ಕಾಯಲು ಸರ್ಕಾರ ನದಿ ಮೂಲಕ ನೀರು ಹರಿಸಿ ಮಂಡ್ಯ ಜಿಲ್ಲೆಯ ರೈತರಿಗೆ ಬೇಸಿಗೆ ಹಂಗಾಮು ಬೆಳೆಗೂ ನೀರು ಕೊಡದೆ ಮೋಸ ಮಾಡಿತು ಎಂದು ದೂರಿದರು.ಈಗ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಿ ಬೆಳೆ ಬೆಳೆಯಲು ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ನೀರಾವರಿ ಸಚಿವರು ಸೇರಿದಂತೆ ಸರ್ಕಾರದ ಮಂತ್ರಿಗಳು ಜಿಲ್ಲೆಯ ರೈತರಿಗೆ ನೀರು ಹರಿಸದೆ ಬರಡು ಭೂಮಿ ಮಾಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಮೂರು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ರೈತ ಕುಟುಂಬಗಳ ಜೊತೆ ಜನ-ಜಾನುವಾರುಗಳನ್ನು ರಸ್ತೆಗಿಳಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಮಾತನಾಡಿ, ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 87 ಅಡಿ ನೀರಿದ್ದು ನಾಲೆಗಳಿಗೆ ನೀರು ಹರಿಸಿ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಜಯರಾಮು, ಮಹದೇವಪುರ ಕೃಷ್ಣ, ಮಹದೇವು, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.