ಕಳಪೆ ಫಲಿತಾಂಶಕ್ಕೆ ಕಾರಣರಾದವರನ್ನುಅಮಾನತುಗೊಳಿಸಿ: ರೈತಸಂಘ ಆಗ್ರಹ

| Published : May 14 2024, 01:09 AM IST

ಕಳಪೆ ಫಲಿತಾಂಶಕ್ಕೆ ಕಾರಣರಾದವರನ್ನುಅಮಾನತುಗೊಳಿಸಿ: ರೈತಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರೈತಸಂಘದ ವತಿಯಿಂದ ಸೋಮವಾರ ತಾಲೂಕಿನ ಎಸ್‌ಎಸ್ಎಲ್ಸಿ ಕಳಪೆ ಫಲಿತಾಂಶಕ್ಕೆ ಕಾರಣರಾದವರನ್ನು ಅಮಾನತು ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್ ಪಿಓಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳನ್ನು ಅಮಾನತುಗೊಳಿಸಿ ಎಂದು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ನೀಡಿ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ತಾಲೂಕಿನ ವಿದ್ಯಾರ್ಥಿಗಳ ಫಲಿತಾಂಶ ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಅನುದಾನಿತ ಹಾಗೂ ಖಾಸಗಿ ಶಾಲೆಗಳ ಪರೀಕ್ಷಾ ಫಲಿತಾಂಶಕ್ಕಿಂತ ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆಯಾಗಿದೆ. ಕಳೆದ ಬಾರಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿತ್ತು. ಆದರೆ ಒಂದೇ ವರ್ಷಕ್ಕೆ ಜಿಲ್ಲೆಯೂ ಸಹ 21ನೇ ಸ್ಥಾನಕ್ಕೆ ಕುಸಿದಿದೆ. ಗ್ರಾಮೀಣ ಭಾಗಗಳಲ್ಲಿ ಅತೀ ಹೆಚ್ಚು ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಉತ್ತಮ ಶಿಕ್ಷಣ ದೊರೆಯಲಿ ಎಂದು ಸರ್ಕಾರ ಹೆಚ್ಚಿನ ಅನುದಾನವನ್ನು ಸಹ ಒದಗಿಸುತ್ತದೆ. ಆದರೆ, ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂಬ ಅನುಮಾನ ಮೂಡುತ್ತಿದ್ದು, ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಆದಕಾರಣಕ್ಕೆ ಈ ಬಾರಿ ಕಳಪೆ ಫಲಿತಾಂಶ ಬರಲು ಕಾರಣವಾಗಿದೆ. ಈ ಬಗ್ಗೆ ಸರ್ಕಾರ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಿ ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಗೋಪಾಲಪ್ಪ, ರಂಗಸ್ವಾಮಿ, ಮೀಸೆ ರಾಮಣ್ಣ, ಜಗನ್ನಾಥ್, ರಾಜೇಶ್, ರಾಮಕೃಷ್ಣ, ದಾಸಪ್ಪ, ಬಾಲಕೃಷ್ಣ, ಚಂದ್ರಣ್ಣ ಮುಂತಾದವರಿದ್ದರು.