ಕೃಷಿ ಪಂಪ್‌ಸೆಟ್‌ಗೆ ಆಧಾರ್‌ ಜೋಡಣೆ ಕೈಬಿಡಲು ರೈತರ ಒತ್ತಾಯ

| Published : Sep 05 2024, 12:36 AM IST

ಕೃಷಿ ಪಂಪ್‌ಸೆಟ್‌ಗೆ ಆಧಾರ್‌ ಜೋಡಣೆ ಕೈಬಿಡಲು ರೈತರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ಯೋಜನೆ ಕೈಬಿಡಬೇಕು.

ಹೊಸಪೇಟೆ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮೂಲಕ ಖಾಸಗೀಕರಣಗೊಳಿಸಿ ವಿದ್ಯುತ್ ಶುಲ್ಕ ವಿಧಿಸುವ ಸರ್ಕಾರದ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ನಗರದ ಜೆಸ್ಕಾಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಗಂಗಾಕಲ್ಯಾಣ ಯೋಜನೆ ಅಡಿ ಬರುವಂತಹ ಕೃಷಿ ಕೊಳವೆಬಾವಿಗಳಿಗೆ ಟಿ.ಸಿ., ವಿದ್ಯುತ್‌ಕಂಬ, ವೈರ್‌ ಇತರೆ ಸಾಮಗ್ರಿಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿಯೇ ಬಾಡಿಗೆ ವಾಹನಗಳ ಮೂಲಕ ಕೊಂಡೊಯ್ಯುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಒಂದು ವಾಹನ ಕೂಡ ಇಲ್ಲ. ರೈತರಿಗೆ ಸಲಕರಣೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸ್ಥಳಾಂತರಿಸಲು ವಾಹನ ಇಲ್ಲ. ಸರ್ಕಾರದ ಅನುದಾನದಿಂದ ವಾಹನ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ನಂಬರ್ ಜೋಡಣೆ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸುವ ಯೋಜನೆ ಜಾರಿ ಮಾಡಬಾರದು. ಗೃಹಬಳಕೆ 200 ಯುನಿಟ್‌ಗಿಂತ ಹೆಚ್ಚುವರಿಯಾಗಿ ಬಂದಂತಹ ಯುನಿಟ್‌ ದರವನ್ನು ಕೂಡಲೇ ಕಡಿಮೆ ಮಾಡಬೇಕು. ವಿದ್ಯುತ್ ಅಪಘಾತಗಳಿಗೆ ಸಿಲುಕಿ ಮರಣ ಹೊಂದುವ ವ್ಯಕ್ತಿಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸಿನಿಂದ 8 ತಾಸಿನವರೆಗೆ ನಿರಂತರ ವಿದ್ಯುತ್ ಸಂಪರ್ಕ ನೀಡಬೇಕು. ಗೃಹಬಳಕೆಯ ವಿದ್ಯುತ್‌ನ್ನು ನಗರ ಭಾಗದಲ್ಲಿ ನಿರಂತರ ನೀಡುತ್ತಿದ್ದು, ಹಳ್ಳಿ ಭಾಗದಲ್ಲಿ ಮಾತ್ರ ವಿದ್ಯುತ್‌ನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಇದು ಸಮಾನಾಂತರವಾಗಿ ಹಳ್ಳಿ ಮತ್ತು ನಗರ ಭಾಗದಲ್ಲಿ ಗೃಹ ಬಳಕೆ ವಿದ್ಯುತ್ ನೀಡಬೇಕು. ಸುಮಾರು 50ರಿಂದ 60 ವರ್ಷಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಾಕಿರುವಂತಹ ವಿದ್ಯುತ್ ಸಂಪರ್ಕದ ತಂತಿಯನ್ನು ಪ್ರಸ್ತುತದವರೆಗೆ ಯಾವುದೇ ರೀತಿಯಾಗಿ ಬದಲಾವಣೆ ಮಾಡಿಲ್ಲ. ಇದನ್ನು ತ್ವರಿತಗತಿಯಲ್ಲಿ ಈಗಿನ ಉತ್ತಮ ವಿದ್ಯುತ್ ಸಂಪರ್ಕದ ತಂತಿಗಳನ್ನು ಹಾಕಬೇಕು ಎಂದರು.

ಬೈಲುವದ್ದಿಗೇರಿ ಗ್ರಾಮದ ಹತ್ತಿರ 110 ಕೆ.ವಿ. ಸಬ್‌ಸ್ಟೇಷನ್ ಪ್ರಮಾಣ ವಿದ್ಯುತ್ ಸಂಪರ್ಕದ ವ್ಯವಸ್ಥಾಪನಾ ಕೇಂದ್ರವು ತುಂಬ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅದನ್ನು ಆದಷ್ಟು ತ್ವರಿತಗತಿಯಲ್ಲಿ ಮಾಡಬೇಕು. ಬೈಲುವದ್ದಿಗೇರಿ ಗ್ರಾಮದಿಂದ ಇನ್ನಿತರೆ ಸುತ್ತಮುತ್ತಲಿರುವ ಎಲ್ಲ ಭಾಗದ ಗ್ರಾಮಗಳಿಗೆ ಇದರಿಂದ ತುಂಬ ಅನುಕೂಲವಾಗುತ್ತದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಸುಟ್ಟುಹೋದ ನಂತರ ಬಹಳ ದಿನಗಳವರೆಗೆ ರೈತರನ್ನು ಅಲೆದಾಡಿಸುವುದನ್ನು ತಪ್ಪಿಸಿ ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಂಡು 24 ತಾಸಿನ ಒಳಗಡೆ ಟಿ.ಸಿ.ಯನ್ನು ರೈತರಿಗೆ ನೀಡಬೇಕು ಎಂದರು.

ಜೆಸ್ಕಾಂ ಇಲಾಖೆಯ ಅಧಿಕಾರಿ ತೇಜ್ಯಾ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ್, ಮುಖಂಡರಾದ ಎಂ.ಜಡೆಪ್ಪ, ಸಣ್ಣಕ್ಕಿ ರುದ್ರಪ್ಪ ಜಹೀರುದ್ದೀನ್, ಜಾಕೀರ್, ಮೂರ್ತಿ, ಎಚ್.ಸತೀಶ್, ಎ.ರಾಮಾಂಜಿನಿ, ವಿ.ಗಾಳೆಪ್ಪ, ಸುರೇಶ್, ಕೆ.ರಾಮಾಂಜಿನಿ, ಎಲ್.ನಾಗೇಶ್, ಮಹಾರಾಜ್ ದುರುಗಪ್ಪ, ಬಸವರಾಜ್, ಗೋವಿಂದಪ್ಪ, ಅಂಕ್ಲೇಶ್, ಪರಶುರಾಮ, ಹನುಮಂತ ರೆಡ್ಡಿ, ರುದ್ರೇಶ್, ಪ್ರಕಾಶ್, ಪೂರ್ಣೇಶ್, ಪರ್ವತರೆಡ್ಡಿ, ಮಲ್ಲಪ್ಪ, ರಾಜಪ್ಪ ಮತ್ತಿತರರಿದ್ದರು.