ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ: ಸಿದ್ದರಾಮಯ್ಯ

| Published : Nov 01 2023, 01:00 AM IST

ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ: ಸಿದ್ದರಾಮಯ್ಯಬೆಳೆ ಉಳಿಸಿಕೊಳ್ಳಲು ಸರ್ವಪ್ರಯತ್ನ: ಕಾವೇರಿ ಹೋರಾಟಗಾರರಿಗೆ ಸಿಎಂ ಭರವಸೆ
ಬೆಳೆ ಉಳಿಸಿಕೊಳ್ಳಲು ಸರ್ವಪ್ರಯತ್ನ: ಕಾವೇರಿ ಹೋರಾಟಗಾರರಿಗೆ ಸಿಎಂ ಭರವಸೆ ಕನ್ನಡಪ್ರಭ ವಾರ್ತೆ ಮಂಡ್ಯ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಸರ್ವಪ್ರಯತ್ನಗಳನ್ನೂ ಮಾಡುತ್ತೇನೆ. ನಮ್ಮ ರೈತರ ಬಲಿ ಕೊಟ್ಟು ಬೇರೆ ರೈತರ ಹಿತ ಕಾಪಾಡುವ ಬಗ್ಗೆ ಯೋಚನೆ ಮಾಡಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಹೋರಾಟಗಾರರಿಗೆ ಭರವಸೆ ನೀಡಿದರು. ಮಂಗಳವಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಭೇಟಿ ಮಾತನಾಡಿ, ಈಗಿರುವ ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಿದೆ. ಜನರಿಗೆ ಕುಡಿಯುವ ನೀರು ಕೊಡಬೇಕಿದೆ. ಉಳಿದ ನೀರನ್ನು ತಮಿಳುನಾಡಿಗೂ ಕೊಡಬೇಕು, ನಮ್ಮ ಬೆಳೆಗೂ ಕೊಡಬೇಕಿದೆ. ನಮ್ಮ ಅರ್ಜಿಯನ್ನು ಪ್ರಾಧಿಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ಕೂಡ ಪ್ರಾಧಿಕಾರದ ಆದೇಶವನ್ನೇ ಎತ್ತಿಹಿಡಿದಿದೆ. ಈಗಿರುವ ಮುಂಗಾರು ಬೆಳೆಯನ್ನ ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸದಿಂದ ಹೇಳಿದರು. ಕಾವೇರಿ ನೀರು ಹಂಚಿಕೆ ಸೂಕ್ಷ್ಮ ವಿಚಾರ. ಎಲ್ಲವನ್ನೂ ನಿಂತ ಸ್ಥಳದಲ್ಲಿಯೇ ಹೇಳಲು ಸಾಧ್ಯವಿಲ್ಲ. ನೀರನ್ನು ಎಷ್ಟು ಬಿಟ್ಟರೆ ಏನಾಗುತ್ತೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ವರ್ಷಕ್ಕೆ ಕುಡಿಯಲು ನಮಗೆ 35 ಟಿಎಂಸಿ ನೀರು ಬೇಕು. ಮಳೆ ಬಾರದಿದ್ದರೆ ಇನ್ನೊಂದು ಬೆಳೆ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಮಳೆ‌ ಬರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು. ನಾನೂ ರೈತನ ಮಗ. ರೈತರ ಕಷ್ಟ ಏನೆಂದು ನನಗೂ ಗೊತ್ತಿದೆ. ರೈತರಿಗೆ ಬರ ಬಂದರೆ‌ ಏನಾಗುತ್ತೆ ಅಂತಾನೂ ಗೊತ್ತಿದೆ. ರೈತರು ಹೇಗೆ ಸಾಲಗಾರರಾಗುತ್ತಾರೆ ಎಂಬ ಬಗ್ಗೆ ಅರಿವಿದೆ. ರೈತರ ಹಿತ ಕಾಪಾಡುವ ವಿಚಾರದಲ್ಲಿ ನಾನು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕೋಸ್ಕರ ರೈತರನ್ನ ಬಲಿ‌ಕೊಡುವುದೂ ಇಲ್ಲ. ಅಧಿಕಾರಕ್ಕೆ ನಾನು ಅಂಟಿಕೊಂಡಿಯೂ ಕುಳಿತಿಲ್ಲ ಎಂದು ಸ್ಪಷ್ಟಪಡಿಸಿದರು. ಆಗಸ್ಟ್ ತಿಂಗಳಲ್ಲಿ ಮಳೆ ಬರಲಿಲ್ಲ. ಸೆಪ್ಟೆಂಬರ್ ನಲ್ಲಿ ಸ್ವಲ್ಪ ಮಳೆಯಾಯಿತು. ಜಲಾನಯನ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಲಿಲ್ಲ. ರಾಜ್ಯ ಮಾತ್ರವಲ್ಲದೆ ದೇಶದ ಅನೇಕ ಕಡೆ ಮಳೆಯಾಗಲಿಲ್ಲ. ಕೇರಳದ ವೈನಾಡಿನಲ್ಲಿ ಮಳೆಯಾಗದಿದ್ದ ಕಾರಣ ಕಬಿನಿ ಜಲಾಶಯಕ್ಕೂ ನೀರು ಬರಲಿಲ್ಲ‌. ಕಬಿನಿ, ಕೆಆರ್‌ಎಸ್, ಹಾರಂಗಿ, ಹೇಮಾವತಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಷ್ಟು ಮಳೆಯಾಗಲಿಲ್ಲ. ಈ ಬಾರಿ ಕೆಆರ್‌ಎಸ್‌ ನೀರಿನ ಮಟ್ಟ 112 ಅಡಿವರೆಗೆ ಮಾತ್ರ ತಲುಪಿತು. ಹೇಮಾವತಿ, ಕೆ.ಆರ್.ಎಸ್, ಕಬಿನಿ ಜಲಾಶಯ ಭರ್ತಿಯಾಗಲೇ ಇಲ್ಲ. ಇದು ಕರ್ನಾಟಕದ ಪಾಲಿಗೆ ಸಂಕಷ್ಟದ ವರ್ಷವಾಗಿದೆ ಎಂದರು. ನಾಲ್ಕು ರಾಜ್ಯಗಳಲ್ಲಿ ಈ ಕಾವೇರಿ ಸಮಸ್ಯೆ ಇದೆ. ಈ ವ್ಯಾಜ್ಯಕ್ಕೆ ನೂರು ವರ್ಷ ಇತಿಹಾಸ ಇದೆ. ಹಳೆಯ ಒಪ್ಪಂದವನ್ನು ಹಿಡಿದುಕೊಂಡು ಈಗಲೂ ಅಳ್ಳಾಡಿಸುತ್ತಿದ್ದಾರೆ. ನೀರು ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆಯೂ ನಾವು ವಾದ ಮಾಡಿದ್ದೇವೆ. ಇದರ ನಡುವೆ ನಿನ್ನೆಯೂ 2,600 ಕ್ಯುಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ಕರೆಯುತ್ತಿದ್ದೇವೆ. ಅಲ್ಲಿ ಕಾವೇರಿ ಬಗ್ಗೆ ಚರ್ಚೆ ಮಾಡುತ್ತೇವೆ. ಗಂಭೀರವಾಗಿ ಚರ್ಚಿಸಿ ರೈತರ ಹಿತ ಕಾಪಾಡುವ ತೀರ್ಮಾನ ಮಾಡುತ್ತೇವೆ. ಅದನ್ನ ಆಳವಾಗಿ ಚರ್ಚೆ ಮಾಡುವುದಿಲ್ಲ ಎಂದರು. ಸಚಿವ ಎನ್‌.ಚಲುವರಾಯಸ್ವಾಮಿ, ಮಾಜಿ ಸಚಿವರಾದ ಎಂ.ಎಸ್‌.ಆತ್ಮಾನಂದ, ಡಿ.ಸಿ.ತಮ್ಮಣ್ಣ, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಕಾಂಗ್ರೆಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್‌.ಚಿದಂಬರ್‌ ಇತರರಿದ್ದರು. ಕೋಟ್‌.... ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೈಷುಗರ್ ಕಾರ್ಖಾನೆಗೆ 10 ಕೋಟಿ ರು. ಕೇಳಿದ್ದರು. ನಾನು ಹತ್ತು ಕೋಟಿ ಯಾಕೆ 50 ಕೋಟಿ‌ ರು. ಕೊಡುವುದಾಗಿ ಹೇಳಿ ಕೊಟ್ಟೆ. ಆದರೆ, ಈಗ ಕಂಪನಿಯಲ್ಲಿರುವ ಸಕ್ಕರೆಯನ್ನು ಮಾರಲು ಸಾಧ್ಯವಾಗುತ್ತಿಲ್ಲ. ಆದರೂ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತೇನೆ. ನಾವೂ ನಿಮ್ಮ ಪರವಾಗಿ ಇದ್ದೇವೆ. ಅದರಲ್ಲಿ ಸಂಶಯ ಬೇಡ. ಸಿದ್ದರಾಮಯ್ಯ, ಮುಖ್ಯಮಂತ್ರಿ