ಪರಿಸರ ಉಳಿಸಿ, ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ವನಮಹೋತ್ಸವ ಮತ್ತು ಗ್ರಾಮ ಅರಣ್ಯ ಸಮಿತಿಗಳ ಲಾಭಾಂಶ ಹಂಚಿಕೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಸಿಪರಿಸರ ಉಳಿಸಿ, ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದರೆ ಅದೇ ಸಮಯದಲ್ಲಿ ತಲೆಮಾರುಗಳಿಂದ ಬೆಟ್ಟದ ಜಮೀನನ್ನು ನಂಬಿ ಬದುಕುತ್ತಿರುವ ರೈತರ ಹಿತರಕ್ಷಣೆಯೂ ಅಷ್ಟೇ ಮುಖ್ಯ. ಭಾಗಾಯತ ಜಮೀನಿಗೆ ಹೊಂದಿಕೊಂಡಿರುವ ''''ಬೆಟ್ಟ ಬ ಖರಾಬ್'''' ಜಾಗದ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬೆಟ್ಟ ಬಳಕೆದಾರರಾದ ನಾವು ನಮ್ಮ ಹಕ್ಕನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ನಗರದ ಶಾಲ್ಮಲಾ ಭವನದಲ್ಲಿ ಅರಣ್ಯ ಇಲಾಖೆಯಿಂದ ವನಮಹೋತ್ಸವ ಮತ್ತು ಗ್ರಾಮ ಅರಣ್ಯ ಸಮಿತಿಗಳ ಲಾಭಾಂಶ ಹಂಚಿಕೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ತೋಟಗಳ ಸುತ್ತಮುತ್ತನಲ್ಲಿ ಪಾರಂಪರಿಕ ಹಣ್ಣು ಹಂಪಲ ನೀಡುವ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಕಾಡನ್ನು ಉಳಿಸಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.ಮಲೆನಾಡು ಮತ್ತು ಕರಾವಳಿ ಭಾಗದ ರೈತರಿಗೆ ಭಾಗಾಯತ ಜಮೀನುಗಳಷ್ಟೇ ಬೆಟ್ಟದ ಜಮೀನುಗಳೂ ಮುಖ್ಯವಾಗಿವೆ. ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಬೆಟ್ಟದ ಹಕ್ಕನ್ನು ಬಳಸಿಕೊಂಡು ಬರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಕೆಲವು ನಿಯಮಾವಳಿಗಳು ರೈತರಿಗೆ ತೊಂದರೆ ನೀಡುವಂತಿರಬಾರದು. ಬೆಟ್ಟ ಬಳಕೆದಾರರಾದ ನಾವು ಯಾವುದೇ ಕಾರಣಕ್ಕೂ ನಮ್ಮ ಸಾಂಪ್ರದಾಯಿಕ ಹಕ್ಕನ್ನು ಹಾಗೂ ಬೆಟ್ಟದ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಎಂದು ಶಾಸಕರು ಸರ್ಕಾರ ಹಾಗೂ ಇಲಾಖೆಯ ಗಮನ ಸೆಳೆದರು.ಇದೇ ಸಂದರ್ಭ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮ ಅರಣ್ಯ ಸಮಿತಿಗಳ ಸದಸ್ಯರಿಗೆ ನಿಯಮಾನುಸಾರ ಲಾಭಾಂಶವನ್ನು ಹಂಚಿಕೆ ಮಾಡಲಾಯಿತು. ಕಾಡು ಬೆಳೆಸುವಲ್ಲಿ ಶ್ರಮಿಸಿದ ಸ್ಥಳೀಯ ಸಮಿತಿಗಳ ಕಾರ್ಯವನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭ ಡಿಸಿಎಫ್ ಸಂದೀಪ್ ಸೂರ್ಯವಂಶಿ, ಪರಿಸರ ತಜ್ಞ ಶಿವಾನಂದ ಕಳವೆ, ಕೆಸಿಎಫ್‌ಗಳಾದ ಎಸ್.ಎಸ್. ನಿಂಗಾಣಿ, ಸಿ.ಎನ್. ಹರೀಶ್, ಆರ್‌ಎಫ್‌ಓಗಳಾದ ಗಿರೀಶ್ ನಾಯ್ಕ್, ಶಿವಾನಂದ್ ನಿಂಗಾಣಿ, ಅಜಯ್ ಕುಮಾರ್, ಉಷಾ ಕಬ್ಬೆರ, ರೋಮನ್ ಶೇಕ್, ರೋಟರಿ ಅಧ್ಯಕ್ಷ ಶ್ರೀನಿವಾಸ್ ನಾಯ್ಕ್, ಎಸ್.ಎನ್. ಹೊಸಮನಿ, ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ವಿನಾಯಕ್ ಶೇಟ್ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮ ಅರಣ್ಯ ಸಮಿತಿಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.