ವಾಣಿಜ್ಯ ಉದ್ದೇಶವೇ ಇಲ್ಲದೆ 38 ಗೋ ಸಾಕಣೆ!

| Published : Mar 23 2024, 01:08 AM IST

ಸಾರಾಂಶ

ಸುಳ್ಯ ಐವರ್ನಾಡಿನ ವಿಕ್ರಮ್‌ ಪೈ ನಿಸ್ಪೃಹ ಗೋಸೇವೆ ಮಾಡುತ್ತಿದ್ದು ಊರಿನ ತಳಿ ಹಸುವಿನ ಸಂತತಿ ಉಳಿಸುವ ಕಾಯಕ ಮಾಡುತ್ತಿದ್ದಾರೆ. ವಿಶೇಷವೆಂದರೆ ಅವರ ಊರಿನಲ್ಲಿ ಎದೆ ಹಾಲು ಸಿಗದ ಮಕ್ಕಳ ಪೋಷಕರಿಗೆ ದನವನ್ನು ನೀಡಿ ಅದು ಹಾಲು ನಿಲ್ಲಿಸಿದ ನಂತರ ವಾಪಸ್‌ ದನ ಪಡೆದುಕೊಳ್ಳುತ್ತಿದ್ದರು. ಈಗಲೂ ಈ ಕಾಯಕ ಮುಂದುವರಿದಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಕಾಲದಲ್ಲಿ ಒಂದೆರಡು ಹಸು ಸಾಕುವುದೇ ಕಷ್ಟ. ಅಂಥದ್ದರಲ್ಲಿ ಯಾವುದೇ ವಾಣಿಜ್ಯ ರೂಪದ ಲಾಭವಿಲ್ಲದೆ, ಕಷ್ಟ- ನಷ್ಟವಾದರೂ ಗೋವಿನ ಮೇಲಿನ ಪ್ರೀತಿಯಿಂದ ಕೇವಲ ಊರಿನ (ಮಲೆನಾಡ ಗಿಡ್ಡ) ತಳಿಯ 38ಕ್ಕೂ ಅಧಿಕ ಹಸು, ಕರು, ಹೋರಿಗಳನ್ನು ಸಾಕುತ್ತಿರುವ ಅತ್ಯಂತ ಅಪರೂಪದ ಕುಟುಂಬ ಇದು. ಇಡೀ ಕರಾವಳಿಯಲ್ಲೇ ಕಮರ್ಶಿಯಲ್‌ ಅಲ್ಲದ ಇಷ್ಟು ದೊಡ್ಡ ಮಟ್ಟದ ಗೋಸಾಕಣೆ ತೀರ ಅಪರೂಪ.

ಅಳಿವಿನ ಅಂಚಿನಲ್ಲಿರುವ ಊರಿನ ಗೋ ತಳಿಯನ್ನು ಉಳಿಸುತ್ತಿರುವ, ನಿಸ್ಪೃಹತೆಯಿಂದ ಗೋ ಸಾಕಣೆಯಲ್ಲಿ ನಿರತರಾಗಿರುವವರು ಸುಳ್ಯದ ಐವರ್ನಾಡಿನ ವಿಕ್ರಮ್‌ ಪೈ ಹಾಗೂ ಅವರ ತಂದೆ ವಿಶ್ವನಾಥ ಪೈ. ಊರಿನ ತಳಿ (ಮಲೆನಾಡು ಗಿಡ್ಡ) ಬಿಟ್ಟರೆ ಬೇರೆ ಹಸುಗಳನ್ನೇ ಅವರು ಸಾಕಿಲ್ಲ ಎನ್ನುವುದು ವಿಶೇಷ.

ವಿಕ್ರಮ್ ಪೈ ಅವರ ತಂದೆ ವಿಶ್ವನಾಥ ಪೈ ಅವರಿಗೆ ಈಗ 80ರ ಇಳಿ ವಯಸ್ಸು. ಗೋಸಾಕಣೆಯನ್ನು ಈಗ ಮಗ ವಿಕ್ರಂ ಪೈ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 1969ರಲ್ಲಿ ಕುಟುಂಬದ ಪಾಲಿನಲ್ಲಿ ವಿಶ್ವನಾಥ ಪೈ ಅವರಿಗೆ ಕೇವಲ 2 ಮಲೆನಾಡ ಗಿಡ್ಡ ಹಸುಗಳು ಸಿಕ್ಕಿದ್ದವು. ಬರೋಬ್ಬರಿ 55 ವರ್ಷ ಕಳೆದು, ಈಗ ಇರುವ ಎಲ್ಲ ಅವರ ಹಸು, ಕರು, ಹೋರಿಗಳು ಆ ಹಸುಗಳ ಸಂತತಿಯದ್ದೇ ಆಗಿರುವುದು ವಿಶೇಷ. 2 ದನಗಳನ್ನು ದೇವಾಲಯಕ್ಕೆ ಶಿವಾಭಿಷೇಕಕ್ಕೆ ದಾನ ಮಾಡಿದ್ದು ಬಿಟ್ಟರೆ ಇಷ್ಟೂ ವರ್ಷಗಳ ಕಾಲ ಒಂದೇ ಒಂದು ಹಸು, ಕರುವನ್ನೂ ಅವರು ಮಾರಾಟ ಮಾಡಿದ್ದೇ ಇಲ್ಲ.

98 ಹಸು ಕರುಗಳಿದ್ದವು!:

ಕೇವಲ 3-4 ತಿಂಗಳ ಹಿಂದೆ ವಿಕ್ರಮ್‌ ಪೈ ಅವರ ಕೊಟ್ಟಿಗೆಯಲ್ಲಿ ಬರೋಬ್ಬರಿ 98 ಊರಿನ ತಳಿಯದ್ದೇ ಹಸುಗಳು ಇದ್ದವು. ನೋಡಿಕೊಳ್ಳಲು ಜನರಿಲ್ಲದೆ 4 ತಿಂಗಳ ಹಿಂದೆ ಅನಿವಾರ್ಯವಾಗಿ 50ಕ್ಕೂ ಅಧಿಕ ಹಸು, ಕರು ಹೋರಿಗಳನ್ನು ಸಿದ್ದಗಂಗಾ ಮಠಕ್ಕೆ ದಾನವಾಗಿ ನೀಡಿದ್ದಾರೆ. ಉಳಿದ 38 ಗೋವುಗಳನ್ನು ಈಗ ಸಾಕುತ್ತಿದ್ದಾರೆ. ಇವುಗಳ ಪೈಕಿ 10 ಹಾಲು ಕೊಡುತ್ತಿದ್ದರೆ, 20ಕ್ಕೂ ಅಧಿಕ ಕರುಗಳು, ಏಳೆಂಟು ಹೋರಿಗಳಿವೆ.

ಪ್ಯೂರ್‌ ಬ್ರೀಡ್ ವಿಶೇಷ:

ವಿಶೇಷವೆಂದರೆ ಇವರು 55 ವರ್ಷಗಳಿಂದ ಕೃತಕ ವಿಧಾನಗಳ ಮೂಲಕ (ಇಂಜೆಕ್ಷನ್‌ ಇತ್ಯಾದಿ) ಗರ್ಭಧಾರಣೆ ಮಾಡಿದ್ದೇ ಇಲ್ಲ. ಬೆಳಗ್ಗೆದ್ದು ಗುಡ್ಡೆಗೆ ಎಲ್ಲ ಗೋವುಗಳನ್ನು ಬಿಡುತ್ತಾರೆ. ಜತೆಗೆ ಹೋರಿಗಳೂ ಇರುವುದರಿಂದ ನೈಸರ್ಗಿಕ ಲೈಂಗಿಕ ವಿಧಾನದಲ್ಲೇ ಹಸುಗಳು ಗರ್ಭ ಧರಿಸುತ್ತವೆ. ಹೀಗಾಗಿ ಅತ್ಯಂತ ಶುದ್ಧ ರೀತಿಯ ಮಲೆನಾಡು ಗಿಡ್ಡ ತಳಿಯನ್ನು ಈ ಮೂಲಕ ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಬೆಳಗ್ಗೆ ಬಿಟ್ಟ ದನಗಳು ಸಂಜೆ ವೇಳೆಗೆ ಹುಲ್ಲು ಮೇಯ್ದು ಮನೆಗೆ ಮರಳುತ್ತವೆ.

ಹಾಲೆಲ್ಲ ಕರುಗಳಿಗೆ:

ಊರಿನ ದನ ಸಹಜವಾಗಿ ಹಾಲು ಕೊಡುವುದು ಕಡಿಮೆ. 98 ಹಸುಗಳಿದ್ದಾಗ 2-3 ಲೀಟರ್‌ ಅಷ್ಟೇ ಮಾರಾಟ ಮಾಡುತ್ತಿದ್ದರು. ಈಗ 10 ಹಾಲು ಕೊಡುವ ದನಗಳಿದ್ದರೂ ಮನೆ ಉಪಯೋಗಕ್ಕೆ ಮಾತ್ರ ಹಾಲು ಕರೆಯುವುದು ಬಿಟ್ಟರೆ ಮಾರಾಟ ಮಾಡುತ್ತಿಲ್ಲ. ಎಲ್ಲ ಹಾಲು ಕರುಗಳಿಗೇ ಮೀಸಲು.

ಈಗೀಗ ಮಲೆನಾಡು ಗಿಡ್ಡ ಎಲ್ಲೂ ಕಾಣಲು ಕಷ್ಟ, ಇದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು ಎನ್ನುವ ಮುತುವರ್ಜಿಯಿಂದ ವಿಕ್ರಮ್‌ ಪೈ- ವಿಶ್ವನಾಥ ಪೈ ಕುಟುಂಬ ಪೋಷಿಸಿಕೊಂಡು ಬರುತ್ತಿದೆ. ಸಿದ್ದಗಂಗಾ ಮಠಕ್ಕೆ ಹಸುಗಳನ್ನು ದಾನವಾಗಿ ನೀಡುವಾಗ ವಿಶ್ವನಾಥ ಪೈ ತೀರ ಬೇಸರ ಮಾಡಿಕೊಂಡಿದ್ದರಂತೆ. ಆದರೆ ವಿಧಿಯಿಲ್ಲದೆ ಪೋಷಣೆ ಕಷ್ಟಸಾಧ್ಯ ಎನ್ನುವ ಕಾರಣದಿಂದ ದಾನ ಮಾಡಿದ್ದಾರೆ.

ವಿಶೇಷವೆಂದರೆ ಅವರ ಊರಿನಲ್ಲಿ ಎದೆ ಹಾಲು ಸಿಗದ ಮಕ್ಕಳ ಪೋಷಕರಿಗೆ ದನವನ್ನು ನೀಡಿ ಅದು ಹಾಲು ನಿಲ್ಲಿಸಿದ ನಂತರ ವಾಪಸ್‌ ದನ ಪಡೆದುಕೊಳ್ಳುತ್ತಿದ್ದರು. ಈಗಲೂ ಈ ಕಾಯಕ ಮುಂದುವರಿದಿದೆ.

ಸಾಕುವ ಕಾಯಕ ಶ್ರೇಷ್ಠ: ‘ಹಸುಗಳ ಕಾಯಕ ಮಾಡುವ ಕೆಲಸದವರಿಗೇ ಹೆಚ್ಚು ಸಂಬಳ ಹೋಗ್ತಿತ್ತು. ನಷ್ಟವೇ ಆದರೂ ಬಾಯಿ ಬಾರದ ಪ್ರಾಣಿಗೆ ಅನ್ನ ಹಾಕುವ ಕಾಯಕ ಶ್ರೇಷ್ಠ. ಹಾಗಾಗಿ ಕಷ್ಟವಾದರೂ ಮುಂದುವರಿಸಿದ್ದೇವೆ’ ಎನ್ನುತ್ತಾರೆ ವಿಕ್ರಂ ಪೈ. ಅವರಿಗೆ 4.70 ಎಕರೆ ಜಾಗವಿದ್ದು, ಅಡಕೆ ಕಾಳುಮೆಣಸು, ಕೊಕ್ಕೊ ಬೆಳೆಸುತ್ತಾರೆ. ಇಡೀ ತೋಟಕ್ಕೆ ಸಂಪೂರ್ಣ ಸಾವಯವ ಗೊಬ್ಬರ ಗೋ ಸಾಕಣೆಯಿಂದಲೇ ಸಿಗುತ್ತಿದೆ. ವಿಕ್ರಂ ಪೈ ಅವರಿಗೆ ಪತ್ನಿ, ಮಕ್ಕಳು, ತಂದೆ, ತಾಯಿ ಇದ್ದಾರೆ.