ಗ್ರಾಮದ ಹತ್ತಕ್ಕೂ ಹೆಚ್ಚು ವಯೋವೃದ್ಧರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಗ್ರಾಪಂ ಎದುರು ಪ್ರತಿಭಟನೆ ಆರಂಭಿಸಿದ ವೃದ್ಧರು, ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹಕನ್ನಡಪ್ರಭ ವಾರ್ತೆ ಕೊಪ್ಪಳ

ಬಿಸರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮಸ್ಥರ ಗ್ರಾಪಂ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದ ಹತ್ತಕ್ಕೂ ಹೆಚ್ಚು ವಯೋವೃದ್ಧರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಗ್ರಾಮದಲ್ಲಿ ಹತ್ತಾರು ದಿನಗಳಿಗೊಮ್ಮೆ ನೀರು ಬರುತ್ತಿವೆ. ಅವು ಒಂದೊಂದು ಬಾರಿ ಬಿಂದಿಗೆಯೂ ಬರುವುದಿಲ್ಲ. ಹೀಗಾದರೆ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

6 ಸಾವಿರ ಜನಸಂಖ್ಯೆ:

ಗ್ರಾಮದಲ್ಲಿ ಸುಮಾರು 6 ಸಾವಿರ ಜನಸಂಖ್ಯೆ ಇದೆ. ಇಷ್ಟು ಜನರು ನೀರಿಗಾಗಿ ಪರಿತಪಿಸುವಂತೆ ಆಗಿದೆ. ಜಿಲ್ಲಾ ಕೇಂದ್ರದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿ ಇದ್ದರೂ ನೀರಿನ ಬವಣೆಯ ಕೂಗು ಜಿಲ್ಲಾಡಳಿತಕ್ಕೆ ಕೇಳಿಸುತ್ತಿಲ್ಲ. ಇನ್ನು ತುಂಗಭದ್ರಾ ನದಿಯಿಂದ ಕೇವಲ 8-10 ಕಿಲೋಮೀಟರ್ ದೂರದಲ್ಲಿ ಇದೆ. ಆದರೂ ನೀರಿನ ಸಮಸ್ಯೆ ಮಾತ್ರ ಹತ್ತಾರು ವರ್ಷಗಳಿಂದ ಇದ್ದೇ ಇದೆ.

ಯೋಜನೆ ವಿಫಲ:

ಬಿಸರಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗಿದೆ. ಆದರೂ ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ಹಲವಾರು ಬಾರಿ ಪರಿಶೀಲನೆ ನಡೆಸಲಾಗಿದೆಯಾದರೂ ಅದನ್ನು ಪರಿಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಆಗಿಲ್ಲ. ಆಡಳಿತ ವೈಫಲ್ಯದಿಂದ ಮತ್ತೆ ಮತ್ತೆ ದುರಸ್ತಿಗೆ ಬರುತ್ತಿದೆಯೇ ಹೊರತು ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ, ಗ್ರಾಮದಲ್ಲಿ ನೀರು ಪೂರೈಕೆಗೆ ಕೊಳವೆಬಾವಿಗಳೇ ಆಧಾರ. ಅಲ್ಲಿಯೂ ಫ್ಲೋರೈಡ್‌ಯುಕ್ತ ನೀರು ಬರುತ್ತವೆ. ಅವು ಸಹ ಸರಿಯಾಗಿ ಬರುವುದಿಲ್ಲ. ಬಹುದೊಡ್ಡ ಗ್ರಾಮವಾಗಿರುವುದರಿಂದ ಇರುವ ಕೊಳವೆಬಾವಿಯಿಂದ ಪೂರೈಕೆ ಮಾಡಲು ಆಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಪರಿತಪಿಸುವಂತೆ ಆಗಿದೆ.

ಬಹಿಷ್ಕಾರವನ್ನೇ ಹಾಕಿದ್ದರು:

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದು ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಹಗಲಿರಳು ಶ್ರಮಿಸಿ, ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆ ಕಾರ್ಯಗತ ಮಾಡಿತು. ಅದು ಪರಿಪೂರ್ಣವಾಗಲಿಲ್ಲವಾದರೂ ಹೇಗಾದರೂ ಜನರು ಸಹಿಸಿಕೊಂಡು ಮತದಾನ ಮಾಡಿದ್ದರು. ಆದರೆ, ಈ ವರ್ಷ ಬಿರುಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ ಆಗಿರುವುದರಿಂದ ತೀವ್ರ ಸಮಸ್ಯೆಯಾಗಿದೆ. ಹೀಗಾಗಿ, ಈ ಬಾರಿ ಮತದಾನ ಬಹಿಷ್ಕಾರ ಮಾಡುವ ಬದಲು ಗ್ರಾಮದ ವೃದ್ಧರು ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ಗೋವಿಂದಪ್ಪ ಮೂಲಿಮನಿ, ಅಂದಪ್ಪ ಸಿಳ್ಳೀನ್, ಅಂದಯ್ಯ ಹಿರೇಮಠ, ಲೋಕನಗೌಡ್ರ ಪೊಲೀಸ್ ಪಾಟೀಲ್, ಬಸಣ್ಣ ಸಸಿ, ಬಸಣ್ಣ ಅಳವಂಡಿ, ಬಸನಗೌಡ, ನೀಲಕಂಟೆಪ್ಪ, ತಿಪ್ಪಣ್ಣ ಸಜ್ಜನ, ನಾಗಲಿಂಗಪ್ಪ ಪತ್ತಾರ ಮೊದಲಾದವರು ಇದ್ದರು.