ಕನ್ನಡಪ್ರಭ ವಾರ್ತೆ ರಾಯಚೂರು
ಭೀಕರ ರಸ್ತೆ ಅಪಘಾತದಲ್ಲಿ ಮಂತ್ರಾಲಯದ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಎಂಟು ಭಕ್ತರು ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಚಿಲಕಲಡೋನ ಗ್ರಾಮದ ಬಳಿ ಗುರುವಾರ ಮುಂಜಾನೆ ಅಪಘಾತ ಸಂಭವಿಸಿದೆ.ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಗುರುವಾರ ಬೆಳಗಿನ ಜಾವ ಚಿಲಕಲಡೋನ ಗ್ರಾಮದ ಬಳಿ ಇವರು ಪ್ರಯಾಣಿಸುತ್ತಿದ್ದ ಬೊಲೆರೊ ವಾಹನಕ್ಕೆ ಎದುರುಗಡೆಯಿಂದ ಬಂದ ಹಾರೋಬೂದಿ (ಫ್ಲೈ ಆ್ಯಷ್) ತುಂಬಿದ್ದ ಟ್ಯಾಂಕರ್ ಡಿಕ್ಕಿ ಹೊಡೆಯಿತು. ದುರ್ಘಟನೆಯಲ್ಲಿ 8 ಜನರು ಸ್ಥಳದಲ್ಲಿಯೇ ಮೃತಪಟ್ಟರು. ಈ ಪೈಕಿ ಐವರು ಮಹಿಳೆಯರು, ಒಬ್ಬಳು ಮೂರು ವರ್ಷದ ಹೆಣ್ಣು ಮಗು, ಇಬ್ಬರು ಪುರುಷರು. ಗಾಯಗೊಂಡ 11 ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಡೇವು ಗ್ರಾಮದ ಮೀನಾಕ್ಷಮ್ಮ (54), ಪುಟ್ಟಮ್ಮ (60) ಮತ್ತು ಅಜಂಪುರ್ ನಿವಾಸಿ ತಾಯಮ್ಮ (60), ಹಾಸನ ಜಿಲ್ಲೆ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಲೋಲಾಕ್ಷಿ (38), ಸುನೀಲ್ (27), ಕುಮಾರ (51) ಹಾಗೂ ನೆಹರು ನಗರದ ಎಸ್.ಕೆ.ವೀಣಾ (25), ಆಕೆಯ ಮಗಳು ನಿಶಿತಾ (3) ಎಂದು ಗುರುತಿಸಲಾಗಿದೆ.ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.