ಸಾರಾಂಶ
ಎಸ್ಎಸ್ಎಲ್‌ಸಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ ಅಪರೂಪದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ : ಎಸ್ಎಸ್ಎಲ್‌ಸಿ ಫೇಲ್ ಆದ ಮಗನಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ ಅಪರೂಪದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಮಗನಿಗೆ ಆತ್ಮಸ್ಥೈರ್ಯ ತುಂಬಲು ಕುಟುಂಬದೊಂದಿಗೆ ಕೇಕ್ ಕಟ್ ಮಾಡಿ ತಿನಿಸಿ ಸಂಭ್ರಮಿಸಿದ್ದಾರೆ.
ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಬಾಗಲಕೋಟೆ ಹಳೆ ನಗರದ ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ 200 ಅಂಕ ಪಡೆದು (ಶೇ.32) ಎಲ್ಲ ಆರೂ ವಿಷಯ ಫೇಲ್ ಆಗಿದ್ದಾನೆ. ಫಲಿತಾಂಶದಿಂದ ಬೇಜಾರು ಮಾಡಿಕೊಳ್ಳದ ತಂದೆ ತಂದೆ, ತಾಯಿ ಸಹೋದರ ಸಹೋದರಿ ಅಜ್ಜಿ ಹಾಗೂ ಕುಟುಂಬ ಅಭಿಷೇಕನ ಬೆಂಬಲಕ್ಕೆ ನಿಂತಿದೆ. ಮಗನಿಗೆ ಸಿಹಿ ತಿನ್ನಿಸಿ ಮುತ್ತು ಕೊಟ್ಟು ಪರೀಕ್ಷೆ ಒಂದೇ ಜೀವನವಲ್ಲ, ಮತ್ತೆ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ್ದಾರೆ ತಂದೆ.
ಹದಿನೈದು ತಿಂಗಳ ಮಗುವಾಗಿದ್ದಾಗ ನಡೆದ ಘಟನೆಯಿಂದಾಗಿ ನೆನಪಿನ ಶಕ್ತಿ ಕಳೆದುಕೊಂಡಿರುವ ಅಭಿಷೇಕ, ಉತ್ತರ ನೆನಪಿಟ್ಟುಕೊಂಡು ಬರೆಯಲು ಅಸಫಲನಾಗಿದ್ದಾನೆ. ಫೇಲ್ ಆಗಿದ್ದರಿಂದ ಬಹಳ ಬೇಜಾರಾಗಿತ್ತು. ತಂದೆ ತಾಯಿ ಧೈರ್ಯ ಹೇಳಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗ್ತೀನಿ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸ್ತೀನಿ ಎಂದು ವಿದ್ಯಾರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾನೆ.