ಚಿಂಚನಸೂರು ಭ್ರಷ್ಟಾಚಾರದ ಪಿತಾಮಹ : ಶಾಸಕ ಕಂದಕೂರು

| Published : Aug 06 2024, 12:30 AM IST

ಸಾರಾಂಶ

ಮಾಜಿ ಸಚಿವ ಬಾಬುರಾವ ಚಿಂಚನಸೂರು ಭ್ರಷ್ಟಾಚಾರದ ಪಿತಾಮಹ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ತರಾಟೆಗೆ ತೆಗೆದುಕೊಂಡರು. ತಮ್ಮ ವಿರುದ್ಧ ಭಾನುವಾರ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ನೀಡಿದ್ದ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿಮಾಜಿ ಸಚಿವ ಬಾಬುರಾವ ಚಿಂಚನಸೂರು ಭ್ರಷ್ಟಾಚಾರದ ಪಿತಾಮಹ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ತರಾಟೆಗೆ ತೆಗೆದುಕೊಂಡರು. ತಮ್ಮ ವಿರುದ್ಧ ಭಾನುವಾರ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ ನೀಡಿದ್ದ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಗುರುಮಠಕಲ್ ಮತಕ್ಷೇತ್ರದಲ್ಲಿ 10 ವರ್ಷಗಳ ಕಾಲ ಶಾಸಕ ಹಾಗೂ ಸಚಿವರಾಗಿ ಕೆಲಸ ಮಾಡಿದ ಚಿಂಚನಸೂರ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದೇ ಸರ್ಕಾರಿ ಅಧಿಕಾರಿಗಳಿಂದ ಹಣ ಕಿತ್ತುಕೊಳ್ಳುತ್ತಿದ್ದ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿದ್ದವು. ಕೆರೆಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಕಳಪೆ ಕಾಮಗಾರಿಗೆ ಬಳಸಿ, ಅಧಿಕಾರಿಗಳನ್ನು ಬೆದರಿಸಿ ಹಣ ಲೂಟಿ ಮಾಡಿದ ಪರಿಣಾಮದ ತಪ್ಪಿಗೆ 14 ಜನ ಎಂಜಿನೀಯರಗಳು ಹಾಗೂ ಹಿರಿಯ ಅಧಿಕಾರಿಗಳು ಅಮಾನತುಗೊಂಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಬಸರಡ್ಡಿ ಪಾಟೀಲ್ ಅನಪೂರ ಮೊದಲು ಬೋರವೆಲ್ ಗುತ್ತಿಗೆದಾರರಾಗಿ ಈ ಭಾಗದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಎಲ್ಲರೂ ಗಮನಿಸಿದ್ದೀರಿ. ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ನಡೆಸಿ, ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೇ ಎಂದು ಕಂದಕೂರು ಪ್ರಶ್ನಿಸಿದರು.

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ನಾನು ಜಿಲ್ಲೆಗೆ ಅನೇಕ ಪ್ರಾಮಾಣಿಕ ಅಧಿಕಾರಿಗಳ ಪೋಸ್ಟಿಂಗ್‌ ಮಾಡಿಸಿದ್ದೇವೆ. ಆದರೆ, ಅವರಿಂದ ಜನರ ಕೆಲಸ ಮಾಡಿಸಿಕೊಂಡಿದ್ದೇವೆ ಹೊರತು ಹಣ ಪಡೆದಿಲ್ಲ. ಈ ವಿಷಯದಲ್ಲಿ ಯಾವುದೇ ಪ್ರಮಾಣಕ್ಕೂ ನಾನು ಸಿದ್ಧ ಎಂದು ಸವಾಲು ಹಾಕಿದರು.

ಭ್ರಷ್ಟಾಚಾರ ಬಗ್ಗೆ ಮಾತನಾಡುವ ಚಿಂಚನಸೂರು ಹಾಗೂ ಬಸರೆಡ್ಡಿ ಬೇಕಿದ್ದರೆ ಲೋಕಾಯುಕ್ತಕ್ಕೆ ನನ್ನ ವಿರುದ್ಧ ದೂರು ಸಲ್ಲಿಸಿ, ತನಿಖೆ ಮಾಡಿಸಲಿ. ನನ್ನ ಆಸ್ತಿ ಎಷ್ಟಿದೆ ಹಾಗೂ ಸಾಲದ ವಿವರ ಸಮಗ್ರ ಮಾಹಿತಿ ಆಗ ಸಿಗಲಿದೆ ಎಂದು ಪ್ರತ್ಯುತ್ತರ ನೀಡಿದರು.