ಪಾಲಕರು ಮತ್ತು ಗುರುಗಳು ಎರಡು ಕಣ್ಣುಗಳಿದ್ದಂತೆ. ವಿದ್ಯಾರ್ಥಿಗಳು ಅವರಿಗೆ ಕೀರ್ತಿ ತರುವಂಥ ಕೆಲಸ ಮಾಡಬೇಕು. ಅಂದಾಗ ಮಾತ್ರ ಅವರಿಗೆ ಸಂತೃಪ್ತಿ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದಲೇ ತಾನಾಗಿಯೇ ಸಾಧನೆ ಒಲಿದು ಬರಲಿದೆ. ಕಲಿಸಿದ ಶಿಕ್ಷಕರು ಮತ್ತು ಬೆಳೆಸಿದ ತಂದೆ-ತಾಯಿಯನ್ನು ಎಂದಿಗೂ ಮರೆಯಬಾರದು.

ಹುಬ್ಬಳ್ಳಿ:

ಜಗತ್ತಿನಲ್ಲಿ ಅಪ್ಪ-ಅಮ್ಮನ ಕೊಡುಗೆ ಅಪಾರವಿದೆ. ಅವರು ಯಾವತ್ತಿಗೂ ಸ್ವಂತ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿಯೇ ಎಲ್ಲವನ್ನೂ ತ್ಯಾಗ ಮಾಡುತ್ತಾರೆ ಎಂದು ಮೇಯರ್‌ ಜ್ಯೋತಿ ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿನ ಲ್ಯಾಮಿಂಗ್ಟನ್‌ ಪ್ರೌಢಶಾಲಾ ಸಭಾ ಭವನದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಅವ್ವ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪಾಲಕರು ಮತ್ತು ಗುರುಗಳು ಎರಡು ಕಣ್ಣುಗಳಿದ್ದಂತೆ. ವಿದ್ಯಾರ್ಥಿಗಳು ಅವರಿಗೆ ಕೀರ್ತಿ ತರುವಂಥ ಕೆಲಸ ಮಾಡಬೇಕು. ಅಂದಾಗ ಮಾತ್ರ ಅವರಿಗೆ ಸಂತೃಪ್ತಿ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದಲೇ ತಾನಾಗಿಯೇ ಸಾಧನೆ ಒಲಿದು ಬರಲಿದೆ. ಕಲಿಸಿದ ಶಿಕ್ಷಕರು ಮತ್ತು ಬೆಳೆಸಿದ ತಂದೆ-ತಾಯಿಯನ್ನು ಎಂದಿಗೂ ಮರೆಯಬಾರದು ಎಂದು ಸಲಹೆ ನೀಡಿದರು.

ಆಕ್ಸ್‌ಫರ್ಡ್‌ ಕಾಲೇಜಿನ ಚೇರ್‌ಮನ್‌ ವಸಂತ ಹೊರಟ್ಟಿ ಮಾತನಾಡಿ, ತಂದೆ ಬಸವರಾಜ ಹೊರಟ್ಟಿ ಅವರನ್ನು ಅವರ ಅವ್ವ ಬೆಳೆಸಿದರು. ರೈತ ಕುಟುಂಬದ ಕುಡಿ ರಾಜ್ಯ ಮತ್ತು ದೇಶ ಮಟ್ಟಕ್ಕೆ ಬೆಳೆದಿದ್ದಾರೆ. ನಮ್ಮ ಅಜ್ಜಿ, ನನ್ನ ಅವ್ವನ ಸಂಸ್ಕಾರ, ಸಂಸ್ಕೃತಿ ನಮ್ಮನ್ನು ಪೊರೆಯುತ್ತಿದೆ. ಜಗತ್ತು ತಾಯಿ ಮಡಿಲಲ್ಲಿದೆ. ತಾಯಿ ಮಾತನ್ನು ಯಾರೂ ತಿರಸ್ಕರಿಸಬಾರದು ಎಂದರು.

ಸನ್ಮಾನ ಸ್ವೀಕರಿಸಿದ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಶ್ರೀ ಶಿವಾನಂದ ಹಾಗೂ ಸನ್ಮಾನ ಸ್ವೀಕರಿಸಿದ ಎಸ್‌ಜೆಎಂವಿಎಸ್‌ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಸುಪಿಯಾ ಮಲಶೆಟ್ಟಿ ಮಾತನಾಡಿದರು. ಲ್ಯಾಮಿಂಗ್ಟನ್‌ ಶಾಲಾ ಸುಧಾರಣಾ ಸಮಿತಿ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಪ್ರೊ. ಕೆ.ಎಸ್‌. ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್‌ ಸೇರಿದಂತೆ ಹಲವರಿದ್ದರು.