ಸಾರಾಂಶ
ಬ್ಯಾಡಗಿ: ಕಾಂಗ್ರೆಸ್ಸಿನ 50ಕ್ಕೂ ಹೆಚ್ಚು ನಾಯಕರು ಸೋಲಿನ ಭೀತಿಯಿಂದ ಲೋಕಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಹೇಳಿದರು.
ತಾಲೂಕಿನ ಶಿಡೇನೂರ, ಮೋಟೆಬೆನ್ನೂರ ಇನ್ನಿತರ ಕಡೆಗಳಲ್ಲಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಆತ್ಮವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ 3 ಸಾವಿರ ಕಿಲೋಮೀಟರ್ ದೂರದ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.ಹಾವೇರಿ ಸೇರಿದಂತೆ ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ 3ನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ಸೂಪರ್ ಪವರ್ ದೇಶವಾಗಿ ಮುನ್ನುಗ್ಗುತ್ತಿದೆ. ಇದಕ್ಕೆ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಸಾಕ್ಷಿ. ಕೊರೋನಾ ಸೇರಿದಂತೆ ಸಾಕಷ್ಟು ಬಿಕ್ಕಟ್ಟು ಎದುರಾದರೂ ಎದುರಿಸುವ ತಾಕತ್ತು ಭಾರತಕ್ಕೆ ಬಂದಿದ್ದು, ಬರುವ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಬೇರುಸಹಿತ ಕಿತ್ತುಹಾಕಿ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಮಮಂದಿರ ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾಗಿದೆಯೇ ಹೊರತು ಸರ್ಕಾರದ ಹಣದಿಂದಲ್ಲ. ರಾಮಮಂದಿರ ಉದ್ಘಾಟನೆಯನ್ನು ಕಾಂಗ್ರೆಸ್ ಯಾವ ಪುರುಷಾರ್ಥಕ್ಕೆ ಬಹಿಷ್ಕರಿಸಿದೆ ಎಂದು ಪ್ರಶ್ನಿಸಿದ ಅವರು, ದೇಶದ್ರೋಹಿಗಳನ್ನು ಹಾಗೂ ವಿರೋಧಿ ಮನಸ್ಥಿತಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸನ್ನು ಬೇರು ಸಹಿತ ಕಿತ್ತೊಗೆಯುವಂತೆ ಕರೆ ನೀಡಿದರು.ಬಿಜೆಪಿ ಜಿಲ್ಲಾಘಟಕದ ಉಪಾಧ್ಯಕ್ಷ ಬಿ.ಎಂ. ಛತ್ರದ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ದಿನದಿಂದಲೇ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಿದೆ. ಇದಕ್ಕೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್, ಪಾಕ್ ಪರ ಘೋಷಣೆಯಂತಹ ಘಟನೆಗಳೇ ಸಾಕ್ಷಿ. ಇದನ್ನೆಲ್ಲ ಗಮನಿಸುತ್ತಿರುವ ದೇಶದ ಜನತೆ ಈ ಬಾರಿ ಮತ್ತೊಮ್ಮೆ ಮೋದಿ ಆಯ್ಕೆ ಮಾಡಲಿದ್ದಾರೆ ಎಂದರು.
ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಮಾಜಿ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಜಿಪಂ ಮಾಜಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಎಸ್ಸಿ ಘಟಕದ ಉಪಾಧ್ಯಕ್ಷ ನಾಗರಾಜ ಹಾವನೂರ, ಮುಖಂಡರಾದ ಭಾರತಿ ಜಂಬಗಿ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ಪುರಸಭೆ ಸದಸ್ಯರಾದ ಸುಭಾಸ ಮಾಳಗಿ, ವಿನಯ ಹಿರೇಮಠ, ನಿಂಗಪ್ಪ ಬಟ್ಟಲಕಟ್ಟಿ, ವಿಜಯಭರತ ಬಳ್ಳಾರಿ, ಸುರೇಶ ಉದ್ಯೋಗಣ್ಣನವರ, ಮಂಜುನಾಥ ಜಾಧವ ಇನ್ನಿತರರಿದ್ದರು.