ದ್ರಾಕ್ಷಿ ಬೆಳೆಗಾರರಿಗೆ ದರ ಕುಸಿತದ ಭೀತಿ

| Published : Mar 01 2024, 02:17 AM IST

ಸಾರಾಂಶ

ಸದ್ಯ ಇಲ್ಲಿನ ವ್ಯಾಪಾರಿಗಳೆಲ್ಲ ಮಹಾರಾಷ್ಟದಲ್ಲೇ ಬೀಡುಬಿಟ್ಟಿದ್ದು ಅಲ್ಲಿ ದ್ರಾಕ್ಷಿ ಖಾಲಿಯಾದ ನಂತರ ರಾಜ್ಯದ ತೋಟಗಳಿಗೆ ಬಂದಾಗ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತರಕಾರಿ, ಹೂ, ರೇಷ್ಮೆ, ಹೈನುಗಾರಿಕೆ ಹಾಗೂ ದ್ರಾಕ್ಷಿ ಬೆಳೆಯನ್ನೇ ಜಿಲ್ಲೆಯ ರೈತರು ಅವಲಂಭಿಸಿದ್ದಾರೆ. ಆದರೆ ಪ್ರತಿಯೊದು ಬೆಳೆಯೂ ದರ ಕುಸಿತ ಇಲ್ಲವೇ ಬೆಳೆ ಹಾನಿಯಿಂದಾಗಿ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಈಗ ಈ ಸಾಲಿಗೆ ದ್ರಾಕ್ಷಿ ಬೆಳೆಗಾರರೂ ಸೇರಿದ್ದು, ದ್ರಾಕ್ಷಿ ದರ ಕುಸಿತದ ಭೀತಿಯಲ್ಲಿದ್ದಾರೆ.

ದ್ರಾಕ್ಷಿ ಬೆಳೆಗಾರರಿಗೆ ಮಾರ್ಚ್, ಏಪ್ರಿಲ್, ಮೇ ಸುಗ್ಗಿಕಾಲ. ಜಿಲ್ಲೆಯ ತೋಟಗಳಲ್ಲಿ ದ್ರಾಕ್ಷಿ ಕೊಯ್ಲು ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಆದರೆ ಈಗಲೇ ಬೆಲೆ ಕುಸಿತದ ಭೀತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಸೀಡ್‌ಲೆಸ್ ದ್ರಾಕ್ಷಿ ದರ ಅಗ್ಗವಾಗಿದ್ದರೆ. ತೋಟಗಳಲ್ಲಿ ಬೆಂಗಳೂರು ನೀಲಿ ದ್ರಾಕ್ಷಿ ರೈತರ ಕೈ ಕಚ್ಚುತ್ತಿದೆ.

ಉತ್ತಮ ಇಳುವರಿ, ದರ ಕುಸಿತ:

ಹಿಂದಿನ 2-3 ವರ್ಷಗಳಲ್ಲಿ ನಿರಂತರ ಮಳೆ ಕಾರಣ ದ್ರಾಕ್ಷಿ ನಿರೀಕ್ಷಿತ ಫಸಲು ಬಂದರೂ ಹಾಳಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಮಳೆಯ ಸಮಸ್ಯೆ ಇಲ್ಲಾ. ದ್ರಾಕ್ಷಿಗೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತ ಈಗ ಕಂಗಾಲಾಗಿದ್ದಾನೆ. ಕಳೆದ ಬಾರಿಗಿಂತ ದ್ರಾಕ್ಷಿ ದರ ಭಾರಿ ಪ್ರಮಾಣದಲ್ಲಿ ಕುಸಿದಿರುವುದೇ ಇದಕ್ಕೆ ಕಾರಣ. ಉತ್ತಮ ಫಸಲು ಬಂದಿದ್ದರೂ ದರದ್ದೇ ಚಿಂತೆ.

ಇನ್ನು ಜಿಲ್ಲೆಯಲ್ಲಿ ಸುಮಾರು 3800 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೇ ನೆರೆಯ ರಾಜ್ಯಗಳಿಗೆ ಬಹುಪಾಲು ದ್ರಾಕ್ಷಿ ಪೂರೈಕೆ ಆಗುತ್ತದೆ. ಬೆಂಗಳೂರು ನೀಲಿ ದ್ರಾಕ್ಷಿ ಬೆಲೆ ಪ್ರತಿ ಕೆ.ಜಿ.ಗೆ 18 ರಿಂದ 20 ರು.ಗಳಿದ್ದರೆ, ಸೀಡ್‌ಲೆಸ್ ದ್ರಾಕ್ಷಿ ಬೆಲೆ 25 ರಿಂದ 30 ರು.ಗಳು. ಶರತ್ 65-70, ಆರ್‌ಕೆ ಗೋಲ್ಡ್ 60-70, ರೆಡ್‌ಗ್ಲೋಬ್ 115 ರು.ಗಳಿಗೆ ಮಾರಾಟವಾಗುತ್ತಿದೆ. ಇದೂ ನಿರೀಕ್ಷೆಗಿಂತ ಕಡಿಮೆ ದರಕ್ಕೆ ಮಾರಾಟವಾಗುತ್ತಿವೆ.

ರಾಜ್ಯಕ್ಕೆ ಮಹಾರಾಷ್ಟ್ರ ಸ್ಪರ್ಧಿ:

ರಾಜ್ಯಕ್ಕೆ ಮಹಾರಾಷ್ಟದಿಂದ ಹೆಚ್ಚು ದ್ರಾಕ್ಷಿ ಬರುತ್ತಿರುವುದರಿಂದ ರಾಜ್ಯದಲ್ಲಿ ಬೆಳೆದ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗಿದೆ. ಮಹಾರಾಷ್ಟ ದ್ರಾಕ್ಷಿ ಬೆಳೆ ಕಟಾವು ಪೂರ್ಣಗೊಂಡ ಬಳಿಕ ರಾಜ್ಯದ ದ್ರಾಕ್ಷಿಗೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಇಲ್ಲಿನ ವ್ಯಾಪಾರಿಗಳೆಲ್ಲ ಮಹಾರಾಷ್ಟದಲ್ಲೇ ಬೀಡುಬಿಟ್ಟಿದ್ದು ಅಲ್ಲಿ ದ್ರಾಕ್ಷಿ ಖಾಲಿಯಾದ ನಂತರ ರಾಜ್ಯದ ತೋಟಗಳಿಗೆ ಬಂದಾಗ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.