ಕರಡಿ, ಚಿರತೆ ದಾಳಿಗೆ ಹೆಚ್ಚಿದ ಆತಂಕ

| Published : Jul 21 2025, 01:30 AM IST

ಕರಡಿ, ಚಿರತೆ ದಾಳಿಗೆ ಹೆಚ್ಚಿದ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಜೇರಿ, ವಟಪರ್ವಿ ಗ್ರಾಮಗಳ ಬಳಿ ರೈತರು ಬೆಳೆದ ಕಲ್ಲಂಗಡಿ ಹಾಗೂ ಇತರ ಹಣ್ಣಿನ ಬೆಳೆಗಳನ್ನು ಕರಡಿಗಳು ತಿಂದು ಹಾಳು ಮಾಡುತ್ತವೆ.

ಕುಕನೂರು: ತಾಲೂಕಿನ ನಾನಾ ಪ್ರದೇಶದಲ್ಲಿ ವನ್ಯಜೀವಿಗಳ ಕಾಟ ಹೆಚ್ಚಾಗಿದೆ. ಅವು ಗ್ರಾಮ ಪ್ರವೇಶಿಸಿ ದಾಳಿ ಮಾಡುತ್ತಿರುವ ಕಾರಣ ರೈತ ವರ್ಗ ಎದೆಗುಂದಿದೆ.

ಜಮೀನುಗಳಲ್ಲಿ ಕೃಷಿ ಕಾಯಕ ಮಾಡುವ ಕೃಷಿಕರು, ಕುರಿ ಕಾಯುವ ಕುರಿಗಾಹಿಗಳಿಗೆ ವನ್ಯಜೀವಿಗಳ ದಾಳಿ ಭಯ ಮೂಡಿಸಿದೆ.

ಇತ್ತೀಚೆಗೆ ರ್ಯಾವಣಕಿ ಗ್ರಾಮದ ಬಳಿಯ ಜಮೀನೊಂದರಲ್ಲಿ ಕರಡಿ ಹಾಗೂ ಎರಡು ಕರಡಿ ಮರಿಗಳು ರೈತರ ಮೇಲೆ ದಾಳಿ ಮಾಡಿದ್ದವು. ಕರಡಿಗಳ ದಾಳಿಯಿಂದ ರೈತ ಗಾಯಗೊಂಡಿದ್ದರು. ಕರಡಿ ದಾಳಿ ಮಾಡಿದ ಸಮೀಪ ಇಂದಿರಾ ಗಾಂಧಿ ವಸತಿ ಶಾಲೆ ಇದ್ದು, ಮಕ್ಕಳು, ಪಾಲಕರು ಸಹ ಕರಡಿ ದಾಳಿಯಿಂದ ಭಯಭೀತರಾಗಿದ್ದರು. ಇತ್ತೀಚೆಗೆ ನೆಲಜೇರಿ ಗ್ರಾಮದಲ್ಲಿ ಕುರಿಗಳ ಹಟ್ಟಿಯ ಮೇಲೆ ಚಿರತೆ ದಾಳಿ ಮಾಡಿ 14 ಕುರಿಗಳನ್ನು ಸಾಯಿಸಿತ್ತು. ಇದರಿಂದ ಕುರಿ ನಂಬಿ ಬದುಕು ಕಟ್ಟಿಕೊಂಡಿದ್ದ ಕುರಿಗಾಹಿ ಬದುಕು ಅತಂತ್ರವಾಯಿತು. ಅಲ್ಲದೆ ನೆಲಜೇರಿ ಸುತ್ತಲಿನ ಗ್ರಾಮಗಳಲ್ಲಿ ಕುರಿಗಳ ಹಟ್ಟಿ ಹಾಕಲು ಸಹ ಕುರಿಗಾರರು ಹಿಂಜರಿಯುತ್ತಿದ್ದಾರೆ.

ಕಲ್ಲು ಕ್ವಾರಿಯಲ್ಲಿ ವಾಸ:ಕುಕನೂರಿನ ಗಾವರಾಳ ಸಮೀಪದ ಕಲ್ಲು ಕ್ವಾರಿಯಲ್ಲಿ ಚಿರತೆಗಳ ವಾಸ ಸಹ ಇದೆ. ಈ ಹಿಂದೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಅಳವಡಿಸಿದರೂ ಚಿರತೆಗಳನ್ನು ಹಿಡಿಯಲು ಆಗಿಲ್ಲ. ಅಲ್ಲಿನ ಸುತ್ತಲಿನ ಜಮೀನಿಗೆ ರೈತರು ಒಬ್ಬರೇ ಹೋಗಿ ಕೃಷಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಬೆಳೆ ಹಾನಿ: ಇನ್ನೂ ನೆಲಜೇರಿ, ವಟಪರ್ವಿ ಗ್ರಾಮಗಳ ಬಳಿ ರೈತರು ಬೆಳೆದ ಕಲ್ಲಂಗಡಿ ಹಾಗೂ ಇತರ ಹಣ್ಣಿನ ಬೆಳೆಗಳನ್ನು ಕರಡಿಗಳು ತಿಂದು ಹಾಳು ಮಾಡುತ್ತವೆ. ಇದರಿಂದ ರೈತ ವರ್ಗ ವರ್ಷಪೂರ್ತಿ ಬೆಳೆದ ಬೆಳೆ ಹಾಳು ಮಾಡಿಕೊಳ್ಳುವ ಸ್ಥಿತಿ ತಲುಪಿದೆ.

ಮುನ್ನೆಚ್ಚರಿಕೆ ಅಗತ್ಯ: ತಾಲೂಕಿನಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು. ಕರಡಿ, ಚಿರತೆಗಳ ವಾಸಸ್ಥಳ ಗುರುತಿಸಿ ಅವುಗಳನ್ನು ಹಿಡಿಯುವ ಕಾರ್ಯ ಆಗಬೇಕು. ಇಲ್ಲದಿದ್ದರೆ ಅನಾಹುತ ತಪ್ಪಿದ್ದಲ್ಲ.

ನೆಲಜೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ, ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವ ಮೂಲಕ ರೈತರನ್ನು ಮತ್ತು ಬೆಳೆಗಳನ್ನು ರಕ್ಷಿಸಲು ಶಾಶ್ವತ ಪರಿಹಾರ ಮಾಡಬೇಕು ಎಂದು ನೆಲಜೇರಿ ಗ್ರಾಮದ ವಿರೂಪಾಕ್ಷಗೌಡ ಪಾಟೀಲ ತಿಳಿಸಿದ್ದಾರೆ.

ಕುಕನೂರಿನ ಕಲ್ಲು ಕ್ವಾರಿಗಳಲ್ಲಿ ಚಿರತೆಗಳು ವಾಸವಿದ್ದು, ಅವುಗಳನ್ನು ಅರಣ್ಯ ಇಲಾಖೆ ಹಿಡಿಯಬೇಕು. ಚಿರತೆಗಳು ಕಲ್ಲು ಕ್ವಾರಿಯಲ್ಲಿ ಆಗಾಗ್ಗೆ ಕಾಣಿಸುತ್ತವೆ. ಇದರಿಂದ ಜಮೀನಿನಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕುಕನೂರು ರೈತ ಅಣ್ಣಪ್ಪ ತಿಳಿಸಿದ್ದಾರೆ.